ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಶಿಕ್ಷಣ ಪಡೆಯಿರಿ


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.೨೮; ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಶಿಕ್ಷಣ ಕಲಿಯಬೇಕಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಗುಡ್ಡದೇಶ್ವರಪ್ಪ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ  ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಲೇಜು ಶಿಕ್ಷಣ ಇಲಾಖೆಯ ಆದೇಶದಂತೆ ಪ್ರತಿ ಶೈಕ್ಷಣಿಕ ವರ್ಷದ ಆರಂಭದ ಭಾಗದಲ್ಲಿ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಕಲಿಕೆಗೆ ಯಾವುದೇ ಸಮಸ್ಯೆಯಾಗದೇ ವಿದ್ಯಾರ್ಥಿಗಳು ಕಾಲೇಜಿನ ಶೈಕ್ಷಣಿಕ ವಾತಾವರಣಕ್ಕೆ ಹತ್ತಿರವಾಗಬೇಕಾದರೆ ಕಾಲೇಜಿನ ಮೂಲಭೂತ ಸೌಕರ್ಯ ಹಾಗೂ ಪ್ರವೇಶ, ಕಿರುಪರೀಕ್ಷೆ ಮತ್ತು ಫಲಿತಾಂಶ, ಸರ್ಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಚಿತ್ರದುರ್ಗದ ಮಹಿಳಾ ಕಾಲೇಜು ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಂಡು ಬರುತ್ತಿರುವುದು ತುಂಬಾ ಸಂತೋಷದ ವಿಷಯ ಇದಕ್ಕೆ ಕಾರಣ ನಮ್ಮ ಕಾಲೇಜಿನಲ್ಲಿರುವ ನುರಿತ ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ಶಿಕ್ಷಣ ಪಡೆಯಲೆಂದೇ ಆಗಮಿಸುತ್ತಿರುವ ವಿದ್ಯಾರ್ಥಿಗಳು ಎಂದು ಹೇಳಿದರು.ಶಿಕ್ಷಣದ ಅವಧಿಯಲ್ಲಿ ಜ್ಞಾನಾರ್ಜನೆಗೆ ಗಮನ ನೀಡಿ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅಭಿವಿನ್ಯಾಸ ಕಾರ್ಯಕ್ರಮದ ಸಂಚಾಲಕ ಪ್ರೊ.ಬಿ.ಮಂಜುನಾಥ ಮಾತನಾಡಿ, ವಿದ್ಯಾರ್ಥಿಗಳು ಸದಾ ಕಾಲ ಜ್ಞಾನಕ್ಕೆ ಪ್ರತಿನಿಧ್ಯ ನೀಡಬೇಕು. ಇದಕ್ಕೆ ಶಿಸ್ತು ಮುಖ್ಯ ಈ ಹಿನ್ನೆಲೆಯಲ್ಲಿ ಇಂತಹ ಅಭಿವಿನ್ಯಾಸ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಸಿ.ಚನ್ನಕೇಶವ. ಡಾ.ಶಿವಣ್ಣ, ಡಾ.ಸಿದ್ದಪ್ಪ, ಪ್ರೊ.ಹೆಚ್.ಶಕುಂತಲ, ಪ್ರೊ.ಆರ್.ಲೀಲಾವತಿ, ಡಾ.ಪಿ.ಎನ್.ಮಧುಸೂದನ, ಎಂ.ಗಿರೀಶ್, ಕ್ರೀಡಾ ಸಂಚಾಲಕರಾದ ಶಿವಪ್ರಸಾದ್.ಆರ್, ಗ್ರಂಥಪಾಲಕರಾದ ಕುಮಾರಸ್ವಾಮಿ.ಬಿ.ಹೆಚ್, ಬಸಣ್ಣಗೌಡ.ಕೆ.ಎನ್, ಸುಜಲ ಅಲಿಯಾಸ್ ವೆನ್ನೆಲ, ಶ್ರೀಲಕ್ಷ್ಮೀ.ಎಸ್.ಕೆ, ಶ್ರೀಮತಿ.ನಂದಿನಿ.ಡಿ ಹಾಗೂ ಪ್ರಥಮ ವರ್ಷದ ಬಿ.ಎ, ಬಿ.ಕಾಂ ವಿದ್ಯಾರ್ಥಿಗಳು ಭಾಗವಹಿಸಿದ್ದರು.