ವೈಕುಂಠ ಏಕಾದಶಿ ವಿಶೇಷ ಪೂಜೆ-ಹರಿದು ಬಂದ ಭಕ್ತಸಾಗರ

ಕೋಲಾರ,ಡಿ,೨೪:ವೈಕುಂಠ ಏಕಾದಶಿ ಅಂಗವಾಗಿ ನಗರ ಹಾಗೂ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಿದ್ದು, ನಗರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ, ವೆಂಕಟಾಪುರದ ಪುರಾಣಪ್ರಸಿದ್ದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶನಿವಾರ ಮುಂಜಾನೆಯಿಂದ ರಾತ್ರಿ ೧೦ ಗಂಟೆಯ ವರೆಗೆ ಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದುದು ನಗರದ ಇತಿಹಾಸದಲ್ಲಿ ಪ್ರಥಮವಾಗಿ ಕಂಡು ಬಂತು.
ವೈಕುಂಠ ಏಕಾದಶಿಯಂದು ದೇವರ ದರ್ಶನ ಮಾಡಿದರೆ ಒಳ್ಳೆಯದು ಎಂಬ ನಂಬಿಕೆಯಿಂದ ನಗರ,ಹಳ್ಳಿಗಳಿಂದ ಜನತೆ ಸಾವಿರ ಸಾವಿರ ಸಂಖ್ಯೆಯಲ್ಲಿ ದೇವಾಲಯಗಳತ್ತ ಧಾವಿಸಿದ್ದರು.
ವೈಕುಂಠ ಏಕಾದಶಿ ಅಂಗವಾಗಿ ನಗರದ ಎಲ್ಲಾ ದೇವಾಲಯಗಳನ್ನು ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಸುಗಮ ದರ್ಶನಕ್ಕಾಗಿ ಪೊಲೀಸ್ ಇಲಾಖೆಯ ಸಹಕಾರವನ್ನೂ ಪಡೆಯಲಾಗಿತ್ತು.
ದೊಡ್ಡಪೇಟೆಯ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭಕ್ತರ ಸಾಲು ಕಂಡು ಬಂದಿದ್ದು, ಭಕ್ತರ ಸಾಲು ಸುಣ್ಣಕಲ್ಲು ಬೀದಿಯ ಮೂಲಕ ಶಾಂತಿ ಸ್ಟೋರ್ ರಸ್ತೆಯವರೆಗೆ ಹಾಗೂ ಕಠಾರಿಪಾಳ್ಯದ ಬಿಂದಿಮಾಳ್ಯಂ ಛತ್ರದವರೆಗೂ ಕಂಡು ಬಂತು.
ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದು, ದೇವಾಲಯದಲ್ಲಿ ಪೂಜಾ ಕೈಂಕರ್ಯಗಳ ಉಸ್ತುವಾರಿಯನ್ನು ಅರ್ಚಕರಾದ ಶೇಷಾದ್ರಿ ಭಾರದ್ವಾಜ್, ಅನಂತಕೃಷ್ಣ,ರಂಗನಾಥ್ ಮತ್ತಿತರರು ವಹಿಸಿದ್ದರು.
ವೈಕುಂಠ ಏಕಾದಶಿ ನಂತರ ಭಾನುವಾರದ ವೈಕುಂಠ ದ್ವಾದಶಿಗೆ ದೇವಾಲಯಗಳು ಸಿದ್ದಗೊಳ್ಳುತ್ತಿದ್ದು, ವಿಶೇಷ ಪೂಜೆ, ಹೂವಿನ ಅಲಂಕಾರ,ಪ್ರಸಾದ ವಿನಿಯೋಗ ನಡೆಯಲಿದೆ.
ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಬರುವ ಸಾವಿರಾರು ಭಕ್ತರಿಗೆ ದಿನವಿಡೀ ಪ್ರಸಾದದ ವ್ಯವಸ್ಥೆಯನ್ನು ಅಚ್ಚಯ್ಯಶೆಟ್ಟಿ, ಬೇಕರಿ ಲೋಕೇಶ್, ಮಿಕ್ಚರ್ ಕುಮಾರ್, ಕೋವಾ ಮಂಜುನಾಥ್, ಕುಮಾರ್, ಶರತ್, ಬಾಬು ಮುರಳಿ, ದೇವರಾಜ್ ಮತ್ತಿತರರು ವ್ಯವಸ್ಥೆ ಮಾಡಿದ್ದರು.