ವೈಕುಂಠ ಏಕಾದಶಿ: ಬೀದರನಲ್ಲಿ ವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಕೆ

ಬೀದರ‌:ಡಿ.26: ಇಲ್ಲಿಯ ಶ್ರೀ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನದಲ್ಲಿ ವೈಕುಂಠ ಏಕದಾಶಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನೆರವೇರಿದವು

ಬೆಳಗಿನ ಜಾವ ಅಭಿಷೇಕ, ತುಳಸಿ ಅರ್ಚನೆ, ಭಗವದ್ಗೀತಾ ಪಾರಾಯಣ, ವಿಷ್ಣು ಸಮಸ್ರನಾಮ ಪಾರಾಯಣ, ಭಜನೆ ಮತ್ತು ಸಂಗೀತ ಕಾರ್ಯಕ್ರಮಗಳು ಜರುಗಿದವು. ಮನೆಯಲ್ಲಿ ಘಂಟಾನಾದ ಮೂಲಕ ದೇವರಿಗೆ ಪೂಜೆ ಸಲ್ಲಿಸಿದರೆ, ದೇವಸ್ಥಾನದಲ್ಲಿ ಭಜನೆಯ ಮೂಲಕ ಭಕ್ತಿ ಸಮರ್ಪಣೆ ಮಾಡಲಾಯಿತು.

ಏಕಾದಶಿಯಂದು ವಿಷ್ಣುವಿನ ಭಕ್ತರನ್ನು ಮರಣವೂ ಮುಟ್ಟಲು ಆಗುವುದಿಲ್ಲ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಹೀಗಾಗಿ ಭಕ್ತರು ಶ್ರದ್ಧೆ, ಭಕ್ತಿಯಿಂದ ಉಪವಾಸ ಮಾಡಿ ವಿಷ್ಣುವಿನ ಆರಾಧನೆ ಮಾಡಿದರು.

ಶ್ರೀ ಲಕ್ಷ್ಮಿಸತ್ಯನಾರಾಯಣ ಮೂರ್ತಿಗೆ ಹಲವು ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ವಿಷ್ಣುವಿನ ದರ್ಶನ ಪಡೆದು ಕೃತಾರ್ಥರಾದರು.
ಓಡವಾಡದ ಅನಂತಶಯನ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ವಿಷ್ಣು ಸಹಸ್ರನಾಮ ಪಾರಾಯಣ, ಪ್ರವಚನ, ಅಲಂಕೃತ ದೇವರ ದರ್ಶನ, ಮಹಾಮಂಗಳಾರತಿ ನಡೆಯಿತು.
ಭಕ್ತರು ಮಾಸ್ಕ್‌ ಧರಿಸಿಕೊಂಡು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಸ್ಥಾನಕ್ಕೆ ತಳಿರು ತೋರಣ, ಪ್ರವೇಶ ದ್ವಾರದಲ್ಲಿ ಬಾಳೆಗಿಡಗಳನ್ನು ಕಟ್ಟಲಾಗಿದೆ. ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.