ವೈಕುಂಠ ಏಕಾದಶಿ:ದೇವರ ದರ್ಶನ ಪಡೆದ ಭಕ್ತರು

ಮಧುಗಿರಿ, ಜ. ೧೫- ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಭಕ್ತರಿಗೆ ವಿಶೇಷ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು.
ಮುಂಜಾನೆ ೬ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೂ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತಾದಿಗಳು ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ದೇವರ ದರ್ಶನ ಪಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.
ಪಾದಯಾತ್ರೆ ಬಂದ ಭಕ್ತರು
ಪ್ರತೀ ವರ್ಷದಂತೆ ಈ ವರ್ಷವೂ ಕೊರಟಗೆರೆ ಮತ್ತು ತುಂಬಾಡಿ ಗ್ರಾಮದಿಂದ ಪಾದಯಾತ್ರೆ ಮೂಲಕ ಆಗಮಿಸಿದ ೧೫೦ ಭಕ್ತರ ತಂಡ ಕೊರಟಗೆರೆ ಅಬಕಾರಿ ಗುತ್ತಿಗೆದಾರ ಹೆಚ್. ಮಹದೇವ್ ರವರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಮುಡಿ ಸೇವೆ ನೆರವೇರಿಸಿದರು.
ಶಾಸಕ ಎಂ.ವಿ ವೀರಭದ್ರಯ್ಯ, ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ಕೆ. ಅರುಂಧತಿ, ಡಿವೈಎಸ್ಪಿ ರಾಮಕೃಷ್ಣಯ್ಯ, ಸಬ್‌ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ, ಅಬಕಾರಿ ಇನ್ಸ್‌ಪೆಕ್ಟರ್ ಸುರೇಶ್, ಚಿತ್ರ ನಿರ್ಮಾಪಕ ರವಿ ಆರ್. ಗರಣಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.