ವೇಶ್ಯಾವಾಟಿಕೆ ವಸತಿಗೃಹಕ್ಕೆ ಎಸ್ಪಿ ಭೇಟಿ: ಪರಿಶೀಲನೆ

ತುಮಕೂರು, ಸೆ. ೨೨- ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದ ವಸತಿಗೃಹಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪುರವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿಯ ದೂರು ಹಾಗೂ ಒಡನಾಡಿ ಸಂಸ್ಥೆಯ ಮಾಹಿತಿ ಮೇರೆಗೆ ಕ್ಯಾತ್ಸಂದ್ರದ ವಸತಿಗೃಹವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಕೊಲ್ಕತಾ ಮೂಲದ ಐವರು ಯುವತಿಯರನ್ನು ರಕ್ಷಿಸಿದ್ದು, ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕ್ಯಾತ್ಸಂದ್ರದ ಸದರಿ ವಸತಿಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ರಾಹುಲ್‌ಕುಮಾರ್ ಅವರು ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಶ್ಯಾವಾಟಿಕೆ ನಡೆಸುವವರು ಮಾಡಿರುವ ಖತರ್ನಾಕ್ ಐಡಿಯಾ ಕಂಡು ಬೆಕ್ಕಸ ಬೆರಗಾಗಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಡ್ರಸಿಂಗ್ ಟೇಬಲ್‌ನ ಅಡಿಯಲ್ಲಿಯೇ ಅಡಗುತಾಣ ನಿರ್ಮಿಸಿಕೊಂಡು ಅವಿತುಕೊಳ್ಳಲು ಅವಕಾಶ ಕಲ್ಪಿಸಿದ್ದು ಕಂಡು ಬಂದಿದೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ರಾಹುಲ್‌ಕುಮಾರ್, ಮಹಿಳಾ ಮತ್ತು ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮತ್ತು ಒಡನಾಡಿ ಸಂಸ್ಥೆಯ ಮಾಹಿತಿ ಮೇರೆಗೆ ಪಿ.ಎಸ್.ಐ. ಅವಿನಾಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ವಸತಿಗೃಹದ ಕೆಲ ಭಾಗವನ್ನು ಒಡೆದು ಹಾಕಲಾಗಿದ್ದು, ಪಾಳು ಬಿದ್ದ ಕಟ್ಟಡದಂತಿರುವುದರಿಂದ ಸಾರ್ವಜನಿಕರ ಗಮನ ಕಡಿಮೆ.ಇದನ್ನೇ ಬಂಡವಾಳ ಮಾಡಿಕೊಂಡು ಈ ರೀತಿಯ ದುಷ್ಕೃತ್ಯದಲ್ಲಿ ತೊಡಗಿರುವುದು ಕಂಡು ಬಂದಿದೆ. ಇಬ್ಬರು ಯುವಕರನ್ನು ಬಂಧಿಸಿದ್ದು, ಕೊಲ್ಕತ್ತಾ ಮೂಲದ ಐವರು ಯುವತಿಯರನ್ನು ರಕ್ಷಿಸಲಾಗಿದೆ ಎಂದು ವಿವರ ನೀಡಿದರು.
ಕ್ಯಾತ್ಸಂದ್ರ ಪೊಲೀಸರಿಗಿಂತ ಮೊದಲೇ ಬೇರೆ ಬೇರೆ ಸಂಸ್ಥೆ ಮಾಹಿತಿ ದೊರೆತ್ತಿದ್ದು, ಈ ಸಂಬಂಧ ಸ್ಥಳೀಯ ಪೊಲೀಸರಿಂದ ವಿವರ ಕೇಳಲಾಗುವುದು. ನಗರದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ತಿಳಿಸಿದರು.