ವೇಲ್ಸ್‌ಗೆ ಸೋಲು ತಪ್ಪಿಸಿದ ಬ್ಯಾಲೆ

ದೋಹಾ (ಕತಾರ್), ನ.೨೨- ವಿಶ್ವದ ಸ್ಟಾರ್ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿರುವ ಗ್ಯಾರೆತ್ ಬ್ಯಾಲೆ ಅಂತಿಮ ಹಂತದಲ್ಲಿ ಪೆನಾಲ್ಟಿ ಮೂಲಕ ದಾಖಲಿಸಿದ ಗೋಲ್‌ನ ನೆರವಿನಿಂದ ಇಲ್ಲಿನ ಅಲ್ ರಯ್ಯಾನ್ ಸ್ಟೇಡಿಯಂನಲ್ಲಿ ನಡೆದ ಅಮೆರಿಕಾ ವಿರುದ್ದದ ಪಂದ್ಯದಲ್ಲಿ ವೇಲ್ಸ್ ೧-೧ರ ಅಂತರದ ಡ್ರಾ ಸಾಧಿಸಲು ಸಫಲವಾಗಿದೆ. ಡ್ರಾ ಹಿನ್ನೆಲೆಯಲ್ಲಿ ಎರಡೂ ತಂಡಗಳು ಕೂಡ ತಲಾ ಒಂದೊಂದು ಅಂಕ ಸಂಪಾದಿಸಿಕೊಂಡಿದೆ.


ಎರಡೂ ಉತ್ತಮ ತಂಡವಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಆರಂಭದಿಂದಲೇ ಸಮಬಲದ ಹೋರಾಟ ನಡೆದಿತ್ತು. ಅದರಲ್ಲೂ ಪಾಸಿಂಗ್‌ಗೆ ಹೋಲಿಕೆ ಮಾಡಿದರೆ ಅಮೆರಿಕಾ ಕೊಂಚ ಉತ್ತಮ ಮೇಲುಗೈ ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಥಮಾರ್ಧದ ೩೬ನೇ ನಿಮಿಷದಲ್ಲಿ ತಿಮೋಥಿ ವ್ಹೇ ದಾಖಲಿಸಿದ ಗೋಲಿನ ನೆರವಿನಿಂದ ಅಮೆರಿಕಾ ಪಂದ್ಯದಲ್ಲಿ ಮೊದಲ ಮುನ್ನಡೆ ಸಾಧಿಸಿತು. ಅಂತಿಮವಾಗಿ ಪ್ರಥಮಾರ್ಧ ಇದೇ ಅಂತರದಲ್ಲಿ ಅಂತ್ಯಗೊಂಡಿತು. ಅಲ್ಲದೆ ದ್ವಿತೀಯಾರ್ಧದಲ್ಲಿ ಕೂಡ ಎರಡೂ ತಂಡಗಳು ಗೋಲಿಗಾಗಿ ತೀವ್ರ ಹರಸಾಹಸ ನಡೆಸಿದವು. ಆದರೂ ಇತ್ತಂಡಗಳಿಂದಲೂ ಯಾವುದೇ ಗೋಲು ದಾಖಲಾಗಲಿಲ್ಲ. ಈ ವೇಳೆ ಅಮೆರಿಕಾ ಗೆಲುವು ಸಾಧಿಸುವುದು ಬಹುತೇಕ ನಿಚ್ಛಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಪಂದ್ಯ ಮುಕ್ತಾಯಕ್ಕೆ ಇನ್ನು ಕೆಲವೇ ನಿಮಿಷ ಬಾಕಿ ಉಳಿದಿರುವಾಗ ಅಂದರೆ ೮೨ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಗ್ಯಾರೆತ್ ಬ್ಯಾಲೆ ಅಮೋಘ ಗೋಲು ದಾಖಲಿಸಿ, ಪಂದ್ಯದಲ್ಲಿ ವೇಲ್ಸ್ ಸಮಬಲ ಸಾಧಿಸುವಂತೆ ಮಾಡಿದರು. ಅಂತಿಮವಾಗಿ ಇದೇ ಅಂತರದಲ್ಲಿ ಪಂದ್ಯ ಮುಕ್ತಾಯಗೊಂಡಿತು.