ವೇಲ್ಸ್‌ಗೆ ಮುಳುವಾದ ರೆಡ್‌ಕಾರ್ಡ್‌!: ಇರಾನ್‌ ಪಡೆಗೆ ಅಚ್ಚರಿಯ ಗೆಲುವು

ದೋಹಾ, ನ.೨೫- ಪಂದ್ಯ ಮುಕ್ತಾಯಕ್ಕೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಉಳಿದಿರುವಾಗ ದಾಖಲಾದ ಎರಡು ಅಮೋಘ ಗೋಲ್‌ಗಳ ನೆರವಿನಿಂದ ಇಲ್ಲಿ ಬಲಿಷ್ಠ ವೇಲ್ಸ್‌ ವಿರುದ್ಧದ ಪಂದ್ಯವನ್ನು ಇರಾನ್‌ ೨-೦ ಅಂತರದಲ್ಲಿ ಗೆದ್ದುಕೊಂಡು, ಟೂರ್ನಿಯಲ್ಲಿ ಮುನ್ನಡೆಯುವ ಆಸೆಯನ್ನು ಜೀವಂತವಾಗಿರಿಸಿದೆ. ಪಂದ್ಯದ ೮೬ನೇ ನಿಮಿಷದಲ್ಲಿ ಫೌಲ್ ಎಸಗಿದ ಹಿನ್ನೆಲೆಯಲ್ಲಿ ವೇಲ್ಸ್‌ ಗೋಲ್‌ಕೀಪರ್‌ ವೇಯ್ನ್‌ ಹೆನ್ನೆಸ್ಸೆಗೆ ಕೆಂಪು ಕಾರ್ಡ್‌ ನೀಡಿ ಹೊರಗಟ್ಟಿದ್ದು, ಇರಾನ್‌ ಗೆಲುವಿಗೆ ಕಾರಣವಾಯಿತು. ಇನ್ನು ೧೧೦ನೇ ಅಂತಾರಾಷ್ಟ್ರೀಯ ಪಂದ್ಯವಾಡುವ ಮೂಲಕ ಸ್ಟಾರ್‌ ಆಟಗಾರ ಗ್ಯಾರೆತ್‌ ಬೇಲೆ ವೇಲ್ಸ್‌ ಪರ ಇತಿಹಾಸ ನಿರ್ಮಿಸಿದರು.


ಇಲ್ಲಿನ ಅಹ್ಮದ್‌ ಬಿನ್‌ ಅಲಿ ಸ್ಟೇಡಿಯಂನಲ್ಲಿ ನಡೆದ ʻಬಿʼ ಗುಂಪಿನ ಪಂದ್ಯದಲ್ಲಿ ಸಹಜವಾಗಿಯೇ ವೇಲ್ಸ್‌ ಗೆಲ್ಲುವ ಫೆವರೇಟ್‌ ತಂಡವಾಗಿತ್ತು. ಆದರೆ ಪ್ರದರ್ಶನದಲ್ಲಿ ಮಾತ್ರ ವೇಲ್ಸ್‌ ವಿಫಲತೆ ಕಂಡಿತು. ಮೊದಲಾರ್ಧದಿಂದಲೇ ವೇಲ್ಸ್‌ ಮೇಲೆ ಮುಗಿಬಿದ್ದ ಇರಾನ್‌ ಆಟಗಾರರು ಅಮೋಘ ನಿರ್ವಹಣೆ ನೀಡಿದರು. ವೇಲ್ಸ್‌ಗೆ ಹೋಲಿಕೆ ಮಾಡಿದರೆ ಇರಾನ್‌ ಅತ್ಯದ್ಬುತ ಆಟವನ್ನೇ ನೀಡಿತು. ಆದರೂ ಪ್ರಥಮಾರ್ಧದಲ್ಲಿ ಯಾವುದೇ ಗೋಲು ದಾಖಲಾಗದಿದ್ದರೂ ಇರಾನ್‌ ಆಟ ಅಭಿಮಾನಿಗಳಿಗೆ ಮುದ ನೀಡಿತು. ದ್ವಿತೀಯಾರ್ಧದಲ್ಲೂ ಗೋಲಿಗಾಗಿ ಇತ್ತಂಡಗಳು ಹೋರಾಟ ನಡೆಸಿದರೂ ಯಾರೂ ಸಫಲತೆ ಕಾಣಲಿಲ್ಲ. ಪರಿಣಾಮ ದ್ವಿತೀಯಾರ್ಧದಲ್ಲೂ ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಈ ನಡುವೆ ಪಂದ್ಯ ಮುಕ್ತಾಯಕ್ಕೆ ಅಧಿಕೃತ ಸಮಯದಲ್ಲಿ ಇನ್ನೇನು ಕೆಲವೇ ನಿಮಿಷಗಳು ಅಂದರೆ ೮೬ನೇ ನಿಮಿಷದ ವೇಳೆ ವೇಲ್ಸ್‌ ಗೋಲ್‌ಕೀಪರ್‌ ವೇಯ್ನ್‌ ಹೆನ್ನೆಸ್ಸೆ ತನ್ನ ಸರಹದ್ದು ಮೀರಿ, ಪೆನಾಲ್ಟಿ ಬಾಕ್ಸ್‌ ಹೊರಗಡೆ ಇರಾನ್‌ಗೆ ತಾರೆಮಿಗೆ ಡಿಕ್ಕಿ ಹೊಡೆದಿದ್ದು, ಪಂದ್ಯದ ಗತಿಯನ್ನೇ ಬದಲಾಯಿಸಿತು. ಈ ಪ್ರಮಾದಕ್ಕೆ ವೇಯ್ನ್‌ಗೆ ರೆಫ್ರಿ ಕೆಂಪು ಕಾರ್ಡ್‌ ನೀಡಿ, ಮೈದಾನದಿಂದ ಹೊರಕ್ಕೆ ಕಳುಹಿಸಿದರು. ಬಳಿಕ ೧೦ ಆಟಗಾರರಿಂದಲೇ ವೇಲ್ಸ್‌ ಆಟ ಮುಂದುವರೆಸಿತು. ಆದರೆ ನಿಗದಿತ ೯೦ ನಿಮಿಷಗಳ ಅವಧಿ ಮುಕ್ತಾಯದಲ್ಲೂ ಯಾವುದೇ ಗೋಲು ದಾಖಲಾಗದ ಹಿನ್ನೆಲೆಯಲ್ಲಿ ಹೆಚ್ಚುವರಿ ಅವಧಿ ನೀಡಲಾಯಿತು. ಈ ಮೂಲಕ ಕೇವಲ ೧೦ ಆಟಗಾರರಿಂದಲೇ ಆಟ ಮುಂದುವರೆಸಿದ ವೇಲ್ಸ್‌ಗೆ ಮುಂದಿನ ಅವಧಿಯಲ್ಲಿ ಮರ್ಮಾಘಾತ ಎದುರಾಯಿತು. ಇನ್ನು ಹೆಚ್ಚುವರಿ ಅವಧಿ ಮುಕ್ತಾಯಕ್ಕೆ ಕೆಲವೇ ನಿಮಿಷ ಬಾಕಿ ಉಳಿದಿರುವಾಗ ೮ನೇ ನಿಮಿಷದಲ್ಲಿ ರೌಸ್ಬೆ ಚೆಷ್ಮಿ ದಾಖಲಿಸಿದ ಆಕರ್ಷಕ ಗೋಲು ಇರಾನ್‌ಗೆ ಪಂದ್ಯದಲ್ಲಿ ಮೊದಲ ಮುನ್ನಡೆ ತಂದುಕೊಟ್ಟರೆ ೧೧ನೇ ನಿಮಿಷದಲ್ಲಿ ರಾಮಿನ್‌ ರಾಝಾಲಿನ್‌ ಮತ್ತೊಂದು ಗೋಲು ಹೊಡೆದು ಮುನ್ನಡೆಯನ್ನು ೨-೦ಗೆ ಏರಿಸಿದರು. ಅಂತಿಮವಾಗಿ ಇದೇ ೨-೦ ಅಂತರದಲ್ಲಿ ಇರಾನ್‌ ಪಂದ್ಯ ಗೆದ್ದುಕೊಂಡು, ಅಮೂಲ್ಯ ಮೂರು ಅಂಕ ಸಂಪಾದಿಸಿತು. ಅತ್ತ ಸೋಲಿನಿಂದ ವೇಲ್ಸ್‌ ಸಹಜವಾಗಿಯೇ ಅಭಿಮಾನಿಗಳಿಗೆ ಆಘಾತ ನೀಡಿದೆ.