ವೇಮನ ವಿಚಾರಗಳು ಸಮಾಜಕ್ಕೆ ದಾರಿದೀಪ:ಸಂತೋಷ ಬಂಡೆ

ಇಂಡಿ:ಜ.20: ಮನುಷ್ಯನ ದುರಾಸೆಯ ಆಲೋಚನೆಗಳು ತೊಡೆದು ಹಾಕಲು ವೇಮನ ವಚನಗಳು ತುಂಬಾ ಮುಖ್ಯವಾಗುತ್ತವೆ. ಪ್ರಕೃತಿ, ನಿಸರ್ಗದಂತೆ ಪ್ರೀತಿಯಿಂದ ಬದುಕುವ ಬಗೆಯನ್ನು ತಮ್ಮ ವಚನಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಅವರು ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಲು ತಮ್ಮ ವಚನಗಳ ಮೂಲಕ ಸಾಕಷ್ಟು ಶ್ರಮಿಸಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಮಹಾಯೋಗಿ ವೇಮನ ಅವರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ ಕುಟುಂಬಕ್ಕೆ ಸೇರಿದ ವೇಮನ ಅವರು ವೈಭೋಗವನ್ನೇ ತ್ಯಾಗ ಮಾಡಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡು ಅಸ್ಪೃಶ್ಯತೆ, ಜಾತಿ ಪದ್ಧತಿ, ಅಸಮಾನತೆ ವಿರುದ್ಧ ಹೋರಾಟದಲ್ಲಿ ಶ್ರೇಷ್ಠ ದಾರ್ಶನಿಕರಾಗಿ ಗುರುತಿಸಿಕೊಳ್ಳುತ್ತಾರೆ. ಮನುಕುಲದ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ಅವರ ತ್ಯಾಗ ಸದಾ ಸ್ಮರಣೀಯವಾದದ್ದು ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಕರಾದ ಎಸ್ ಎಸ್ ಅರಬ,ಎಸ್ ಎಂ ಮಕಾನದಾರ,ಎನ್ ಬಿ ಚೌಧರಿ,ಎಸ್ ಪಿ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಜಗಲಿ ಬಳಗ ಮತ್ತು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಜರುಗಿದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲಾ ಮಕ್ಕಳಾದ ಫರ್ಹಾನ್ ಮಕಾನದಾರ,
ಜಕಿಯಾ ಬಾಗವಾನ,ತಸ್ಲಿಂ ನದಾಫ,ಗಜಾಲಾ ಬಾಗವಾನ, ಅಲ್ಮಾಸ ಬಾಗವಾನ ಅವರು ಭಾಗವಹಿಸಿ,”ಮಕ್ಕಳ ಜಗಲಿ ಕಲಾ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ. ಆ ಮಕ್ಕಳಿಗೆ ಶಾಲೆಯ ಶಿಕ್ಷಕ ಸಿಬ್ಬಂದಿ ಹಾಗೂ ಮಕ್ಕಳು ಅಭಿನಂದಿಸಿದ್ದಾರೆ.