ವೇಮನ ಜಯಂತಿ ಆಚರಣೆ

ಕೋಲಾರ, ಜ,೨೧-ಮಹಾಯೋಗಿ ವೇಮನನವರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಮರೇಶ್ ಅವರು ತಿಳಿಸಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ವೇಮನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಯೋಗಿ ವೇಮನ ರವರು ಕೇವಲ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಲ್ಲ. ಬದಲಾಗಿ ಸಮಾಜದ ಎಲ್ಲಾ ವರ್ಗದ ಜನರಿಗೆ ಇವರ ನಡೆ ನುಡಿ ಆದರ್ಶ ಪ್ರಾಯವಾಗಿದೆ. ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಕನ್ನಡದಲ್ಲಿ ಸರ್ವಜ್ಞ ಕವಿ. ತಮಿಳಿನಲ್ಲಿ ತಿರುವಳ್ಳವರ್ ಹಾಗೆಯೇ ತೆಲುಗಿನಲ್ಲಿ ಯೋಗಿ ವೇಮನರವರು ಪ್ರಸಿದ್ಧಿ ಪಡೆದಿದ್ದಾರೆ. ಇವರು ಸಾಮಾನ್ಯ ಜನತೆಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಆಡು ಭಾಷೆಯಲ್ಲಿ ತ್ರಿಪದಿಯ ಪದ್ಯಗಳನ್ನು ರಚಿಸಿ ಅವುಗಳಲ್ಲಿ ತತ್ವ ಆದರ್ಶಗಳನ್ನು ಬೆರೆಸಿ ಸಮಾಜದ ಬದಲಾವಣೆಗೆ ಕಾರಣವಾದವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಸತೀಶ್ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.