ವೇಮನರ ವಿಚಾರಧಾರೆ ಸದಾ ಪ್ರಸ್ತುತ

ಬೆಳಗಾವಿ, ಜ.20: “ಮಹಾಯೋಗಿ ವೇಮನರು ಮಹಾಪುರುಷರು. ಅವರ ವಿಚಾರಧಾರೆಯನ್ನು ಅನುಸರಿಸುತ್ತಿರುವ ರೆಡ್ಡಿ ಸಮುದಾಯವು ಇಡೀ ಸಮಾಜದ ಒಳಿತಿನೊಂದಿಗೆ ತನ್ನ ಒಳಿತು ಕಂಡುಕೊಂಡಿದೆ” ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನರ ಪಾಲಿಕೆಯ ವತಿಯಿಂದ ನಗರದ ರಡ್ಡಿ ಭವನದಲ್ಲಿ ಏರ್ಪಡಿಸಲಾಗಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಅವರು, ಮಹಾಯೋಗಿ ವೇಮನರು ಶ್ರೇಷ್ಠ ಜ್ಞಾನಿ, ಕವಿ, ಬ್ರಹ್ಮಜ್ಞಾನಿಯಾಗಿದ್ದರು. ಅನಿಷ್ಟ ಸಂಪ್ರದಾಯಗಳ ವಿರುದ್ಧ ಹೋರಾಡಿದಂತಹ ದಿಟ್ಟ ವ್ಯಕ್ತಿಯಾಗಿದ್ದ ಅವರು ತಮ್ಮ ವಿಚಾರ ಮತ್ತು ಚಿಂತನೆಗಳಿಂದ ಸದಾ ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು.
ಬೆಳಗಾವಿ ಲೋಕಾಯುಕ್ತ ಎಸ್.ಪಿ. ಯಶೋಧಾ ಒಂಟಗೋಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ, ವಿಶೇಷ ಜಿಲ್ಲಾಧಿಕಾರಿ ಗೀತಾ ಕೌಲಗಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಬೆಳಗಾವಿ ಜಿಲ್ಲೆಯ ರೆಡ್ಡಿ ಸಂಘದ ಅಧ್ಯಕ್ಷರಾದ ಅಧ್ಯಕ್ಷರು ರಾಮಣ್ಣ ಮುಳ್ಳೂರ, ವೆಂಕಟೇಶ ಪಾಟೀಲ, ಟಿ.ಕೆ.ಪಾಟೀಲ , ಹಾಗೂ ಸಮುದಾಯದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯ ಆವರಣದಿಂದ ಮಹಾಯೋಗಿ ವೇಮನರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಚೆನ್ನಮ್ಮ ವೃತ್ತ, ಡಾ.ಅಂಬೇಡ್ಕರ್ ರಸ್ತೆ ಮಾರ್ಗವಾಗಿ ಸಂಚರಿಸಿದ ಮೆರವಣಿಗೆಯು ಸದಾಶಿವನಗರದ ರಡ್ಡಿ ಭವನ ತಲುಪಿತು. ಸಮಾಜದ ಗಣ್ಯರು, ಮಹಿಳೆಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.