
ಕೋಲಾರ,ಆ.೧- ಭಾನುವಾರ ಸರ್ಕಾರಿ ರಜೆಯಾದರೂ ಸಹ ಜಿಲ್ಲಾಧಿಕಾರಿ ಅಕ್ರಂಪಾಷ ತಾಲೂಕಿನ ವೇಮಗಲ್-ಕುರುಗಲ್ ಪಟ್ಟಣ ಹಾಗೂ ಮೇಡಿಹಾಳ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣಕ್ಕೆ ಬರುವ ಮುನ್ನ ತಾಳೆಕೆರೆಯ ಬಳಿ ಗಿಡ ನೆಡುವ ಮುಖಾಂತರ ಆರೋಗ್ಯ ಕಾಪಾಡಿಕೊಳ್ಳಲು ಗಿಡ ಮರಗಳನ್ನು ಬೆಳೆಸಿ ಪರಿಸರ ಅಭಿವೃದ್ದಿ ಪಡೆಸಬೇಕೆಂಬ ಎಂಬ ಸಂದೇಶ ಸಾರಿದರು.
ವೇಮಗಲ್ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮತಗಟ್ಟೆ ಕೇಂದ್ರಗಳನ್ನು ಪರಿಶೀಲಿಸಿದ ನಂತರ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಮತಗಟ್ಟೆಗಳು ಇರಲಿ ಎಂದು ತಹಸೀಲ್ದಾರ್ ಹರ್ಷವರ್ದನ್‌ಗೆ ಸೂಚಿಸಿದ ಜಿಲ್ಲಾಧಿಕಾರಿ ಸಾರ್ವಜನಿಕರ ಸಮಸ್ಯೆಗಳು ಆಲಿಸಿದರು.
ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸತ್ಯ ಸಾಯಿ ಆಸ್ಪತ್ರೆಗೆ ಭೇಟಿ ನೀಡಿ ಕಟ್ಟಡ ಪರಿಶೀಲಿಸಿದ ನಂತರ ಆಸ್ಪತ್ರೆ ನಕ್ಷಾ ವಿನ್ಯಾಸ ವೀಕ್ಷಿಸಿ ಆಸ್ಪತ್ರೆಯಲ್ಲಿ ಎಲ್ಲವೂ ಸಂಪೂರ್ಣವಾಗಿ ಉಚಿತವಾಗಿ ದೊರೆಯುವುದರಿಂದ ಬಹಳಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಈ ಆಸ್ಪತ್ರೆ ಇಲ್ಲಿ ನಿರ್ಮಾಣವಾಗುತ್ತಿರುವುದು ಈ ಭಾಗದ ಜನರ ಪುಣ್ಯ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಶಾಲೆಯ ಆವರಣ, ಅಡುಗೆ ಕೋಣೆ ಸ್ವಚ್ಚತೆ ಕಾಪಾಡಿ ಕೊಂಡಿರುವುದಕ್ಕೆ ಶಾಲಾ ಮಂಡಳಿ ಪ್ರಾಂಶುಪಾಲ ಶ್ರೀನಿವಾಸ್ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿ ಇದೆ ರೀತಿ ಸ್ವಚ್ಚತೆ ಕಾಪಾಡಬೇಕೆಂದು ಸೂಚಿಸಿದರು.