
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 4 : – ರಾಷ್ಟ್ರೀಯ ಹಬ್ಬ, ನಾಡಹಬ್ಬ ಹಾಗೂ ರಾಷ್ಟ್ರನಾಯಕರ ಜಯಂತಿ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಸರ್ಕಾರದ ಶಿಷ್ಟಾಚಾರ ಪಾಲನೆ ಮಾಡುವ ಮೂಲಕ ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ಅನುವು ಮಾಡುವಂತೆ ಸ್ವಾತಂತ್ಯೋತ್ಸವದ ಪೂರ್ವಸಿದ್ಧತಾ ಕೂಡ್ಲಿಗಿ ಸಭೆಯಲ್ಲಿ ಸೇರಿದ ಸರ್ವರು ಸಲಹೆ ಸೂಚನೆ ನೀಡಿದರು.
ರಾಷ್ಟ್ರೀಯ ಹಾಗೂ ನಾಡಹಬ್ಬಗಳು ಗೌರವ ಸೂಚಕ ಕಾರ್ಯಕ್ರಮಗಳಾಗಿದ್ದು ಆ ಸಂದರ್ಭದ ಧ್ವಜಾರೋಹಣ ಹಾಗೂ ವೇದಿಕೆ ಕಾರ್ಯಕ್ರಮಗಳು ಸರ್ಕಾರದ ಶಿಷ್ಟಾಚಾರ ಪಾಲನೆಯಲ್ಲಿ ನಡೆಸಬೇಕು ಇಲ್ಲವಾದಲ್ಲಿ ವಿನಃಕಾರಣ ಬಂದಬಂದವರನ್ನು ಸಭೆಯಲ್ಲಿ ಕೂಡಿಸಿ ಸುಂದರ ಸಭೆಗೆ ಅಗೌರವ ತೋರಬಾರದೆನ್ನುವ ಅಭಿಪ್ರಾಯದ ಸಲಹೆ ಸೂಚನೆಯನ್ನು ಸಂಘ ಸಂಸ್ಥೆಗಳ ಮುಖಂಡರು ನಿನ್ನೆ ಪ್ರವಾಸಿ ಮಂದಿರದಲ್ಲಿ ಜರುಗಿದ ಸ್ವಾತಂತ್ಯೋತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ವ್ಯಕ್ತಪಡಿಸಿದರು.
ತಾಲೂಕು ಕೇಂದ್ರವಾದ ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಆ.15ರಂದು ನಡೆಯುವ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲು ತಾಲೂಕು ಮಟ್ಟದ ಅಧಿಕಾರಿಗಳು, ನಾನಾ ಸಂಘ – ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು, ಕಲಾವಿದರು, ದೇಶಾಭಿಮಾನಿಗಳು ಸೇರಿ ಎಲ್ಲರೂ ಸಹಕಾರ ನೀಡಬೇಕು. ತಾಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕಾರ್ಯಕ್ರಮದಲ್ಲಿ ಲೋಪವಾಗದಂತೆ ಜಾಗ್ರತೆ ವಹಿಸಬೇಕು ಎಂದು ತಹಸೀಲ್ದಾರ್ ಟಿ.ಜಗದೀಶ್ ಹಾಗೂ ತಾಪಂ ಇಒ ವೈ.ರವಿಕುಮಾರ್ ತಿಳಿಸಿದರು.
ದಲಿತ ಮುಖಂಡರಾದ ಎಸ್.ದುರುಗೇಶ್ ಮತ್ತು ಪ ಪಂ ನಾಮನಿರ್ದೇಶಿತ ಮಾಜಿ ಸದಸ್ಯ ಬಂಡೆ ರಾಘವೇಂದ್ರ ಮಾತನಾಡಿ, ಧ್ವಜ ವಂದನೆ ಸಂದರ್ಭ ಶಾಸಕರು ಮತ್ತು ತಹಸೀಲ್ದಾರರು ಮಾತ್ರ ವೇದಿಕೆಯ ಮುಂಭಾಗದಲ್ಲಿ ಇರಬೇಕು. ಉಳಿದ ಗಣ್ಯರು ಹಿಂದೆ ನಿಲ್ಲುವ ಬಗ್ಗೆ ತಿಳಿಸಿದರು ಹಾಗೂ ಮಹಾತ್ಮಾ ಗಾಂಧೀಜಿಗೆ ಗೌರವ ಸಲ್ಲಿಕೆ ಮಾಡುವಂತೆ ಸರ್ಕಾರಿ ಹಾಗೂ ಎಲ್ಲಾ ಸಂಘಸಂಸ್ಥೆಯವರು ಕೂಡ್ಲಿಗಿ ಡಾ ಬಿ ಆರ್ ಅಂಬೇಡ್ಕರ್ ವೃತ್ತಕ್ಕೆ ಗೌರವ ಸಮರ್ಪಣೆ ಮಾಡುವಂತೆ ಸಭೆಯಲ್ಲಿ ನಡುವಳಿ ಮಾಡುವಂತೆ ಒತ್ತಾಯಿಸಿದರು.
ಸ್ವಾತಂತ್ರ್ಯೋತ್ಸವ ಪರೇಡ್ ನಲ್ಲಿ ಸ್ಕೌಟ್ ಅಂಡ್ ಗೈಡ್ಸ್ ಮತ್ತು ಭಾರತ ಸೇವಾದಳದ ಮುಖ್ಯಸ್ಥರನ್ನು ವೇದಿಕೆಗೆ ಆಹ್ವಾನಿಸುವಂತೆ ಕಲಾವಿದರ ಸಂಘದ ಮುಖಂಡ ಬ್ಯಾಳಿ ವಿಜಯಕುಮಾರ ಗೌಡ ಅವರು ಒತ್ತಾಯಿಸಿದರು. ಕಾಟೇರ್ ಹಾಲೇಶ್, ಡಿ.ನಾಗರಾಜ ಮೇಷ್ಟ್ರು ಮಾತನಾಡಿ, ಸರಕಾರದ ಶಿಷ್ಟಾಚಾರದನ್ವಯ ವೇದಿಕೆಯಲ್ಲಿ ಗಣ್ಯರನ್ನು ಮಾತ್ರ ಇರುವಂತೆ ನೋಡಿಕೊಳ್ಳಬೇಕು. ವೇದಿಕೆಯಲ್ಲಿ ಹೆಚ್ಚು ಗಣ್ಯರಿದ್ದರೆ ಸ್ವಾಗತ ಮಾಡುವುದರಲ್ಲೇ ಕಾಲ ಹೋಗಲಿದೆ. ಇದರಿಂದ ವಿದ್ಯಾರ್ಥಿಗಳು ಬಿಸಿಲಿನಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ರಕ್ತದಾನ ಶಿಬಿರ ಆಯೋಜಿಸಿದರೆ, ಹೆರಿಗೆ, ಅಪಘಾತ ಸೇರಿ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ.ಪ್ರದೀಪ್ ಕುಮಾರ್ ಸೂಚಿಸಿದರು. ಇದಕ್ಕೆ ಅನೇಕ ಮುಖಂಡರು ಸಮ್ಮತಿ ಸೂಚಿಸಿದರು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಹಾಸ್ಟೆಲ್ ನಡೆಸುವ ಇಲಾಖೆಗಳಿಂದ ಮಾಡುವಂತೆ ಮುಖಂಡ ಮರುಳಸಿದ್ದಪ್ಪ ಹೇಳಿದರು. ಈ ಕುರಿತು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಇದಲ್ಲದೆ, ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಏರ್ಪಡಿಸಿ, ಬಹುಮಾನ ವಿತರಿಸುವುದು, ವಿದ್ಯಾರ್ಥಿಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಭದ್ರತೆ ಕೈಗೊಳ್ಳುವುದು, ತಾಲೂಕಿನಲ್ಲಿ ನಾನಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವುದು ಸೇರಿ ನಾನಾ ವಿಷಯಗಳ ಬಗ್ಗೆ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಮರುಳಸಿದ್ದಪ್ಪ, ಮುಖಂಡರಾದ ಬ್ಯಾಳಿ ವಿಜಯಕುಮಾರ ಗೌಡ, ಡಿ .ನಾಗರಾಜ ಮೇಷ್ಟ್ರು, ಮಾದಿಹಳ್ಳಿ ನಜೀರ್, ಎಸ್.ದುರುಗೇಶ್, ವಿಭೂತಿ ವೀರಣ್ಣ, ಎ.ಎಂ.ವೀರಯ್ಯ, ಬಂಡೆ ರಾಘವೇಂದ್ರ, ಪರಶುರಾಮ, ಎಂ.ಬಿ.ಶಿವರಾಜ, ಕಾಟೇರ್ ಹಾಲೇಶ್, ಶಾಮಿಯಾನ ಚಂದ್ರಪ್ಪ, ಛಲವಾದಿ ಮಹಾಸಭಾದ ಅಧ್ಯಕ್ಷ ಮಾರಪ್ಪ, ಮಾದಿಗ ದಂಡೋರು ಸಂಘದ ಅಧ್ಯಕ್ಷ ಮಹೇಶ್ ಸೇರಿ ತಾಲೂಕು ಮಟ್ಟದ ನಾನಾ ಇಲಾಖೆಗಳ ಮುಖ್ಯಸ್ಥರು ಇದ್ದರು.
ಸರಕಾರಿ ಕಚೇರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ
ಆ.15ರಂದು ಕೂಡ್ಲಿಗಿ ಪಟ್ಟಣದಲ್ಲಿ ಬೆಳಗ್ಗೆ 7 ಗಂಟೆಗೆ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವಿರುವ ಹುತಾತ್ಮರ ರಾಷ್ಟ್ರೀಯ ಸ್ಮಾರಕಕ್ಕೆ ಪುಷ್ಪಮಾಲೆ ಸಲ್ಲಿಸುವುದರೊಂದಿಗೆ ಕಾರ್ಯಾರಂಭ ಮಾಡುವುದು ಸೇರಿ ಕಾರ್ಯಕ್ರಮದ ವೇದಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು. ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳ ಕಟ್ಟಡಗಳು ಮತ್ತು ಡಾ.ಬಿ.ಆರ್.ಅಂಬೇಡ್ಕರ್, ರಾಜವೀರ ಮದಕರಿ ನಾಯಕ ಸೇರಿ ಇತರೆ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರವನ್ನು ಆ.14 ಮತ್ತು 15 ರಂದು ಎರಡು ದಿನಗಳ ಕಾಲ ಮಾಡಲು ನಾನಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸುವುದರ ಜತೆಗೆ ನಾನಾ ವಿಷಯಗಳ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು.