
ಬೆಂಗಳೂರು,ಆ.4- ಸಿಬ್ಬಂದಿಯ ವೇತನಕ್ಕೆ ಹಣ ಬಳಸುವುದನ್ನು ಬಿಟ್ಟು ಮತ್ತೆ ಬೇರೆ ಯಾವುದಕ್ಕೂ ಹಣ ಖರ್ಚು ಮಾಡಬಾರದು, ಜೊತೆಗೆ ಯಾವುದೇ ದೊಡ್ಡ ಸಮಾರಂಭ ನಡೆಸದಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಇನ್ನಿತರೆ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆ ಪಾರದರ್ಶಕವಾಗಿಲ್ಲ. ಜೊತೆಗೆ ಮತದಾನಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಒದಗಿಸುವಂತೆ ಸಹಕಾರ ಸಂಘಗಳ ನಿಬಂಧಕರು ಸೂಚಿಸಿದ್ದರೂ ಕ್ರಮಕೈಕೊಂಡಿಲ್ಲ ಎಂದು ಅಧ್ಯಕ್ಷ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಸಾ.ರಾ ಗೋವಿಂದು ನೇತೃತ್ವದ ತಂಡ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ಸಂಬಂಧ ಈ ನಿರ್ದೇಶನ ನೀಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಾ.ರಾ ಗೋವಿಂದು ಮತ್ತು ಜಯಸಿಂಹ ಮುಸುರಿ ಅವರು ಚುನಾವಣೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಜಯಸಿಂಹ ಮುಸುರಿ ಮಾತನಾಡಿ, ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಆಯ್ಕೆಗೆ ಮತದಾನ ನಡೆದ ದಿನ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಈ ಬಗ್ಗೆ ಯಾರಿಗೆ ಎಷ್ಟು ಮತ ಬಂದಿವೆ ಎನ್ನುವ ಬಗ್ಗೆ ಚುನಾವಣಾಧಿಕಾರಿಯಾಗಿದ್ದ ಥಾಮಸ್ ಡಿಸೋಜಾ ಅವರಿಗೆ ಇ-ಮೇಲ್ ಮೂಲಕ ಮನವಿ ಮಾಡಲಾಗಿತ್ತು. ವಾರದ ಬಳಿಕ ಪ್ರತಿಕ್ರಿಯೆ ನೀಡಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದೆ. ಸಕ್ಷಮ ಪ್ರಾಧಿಕಾರದಿಂದ ಆದೇಶ ತಂದರೆ ಮಾಹಿತಿ ನೀಡುವುದಾಗಿ ತಿಳಿಸಿದ್ದರು ಎಂದರು.
ಅದರಂತೆ ಸಹಕಾರ ಸಂಘಗಳ ನಿಂಬಂಧಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಲ್ಲಿಂದ ಪಾರದರ್ಶಕ ಚುನಾವಣೆ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಅರ್ಜಿದಾರರಿಗೆ ಮಾಹಿತಿ ಒದಗಿಸುವಂತೆ ಮೂರು ನಾಲ್ಕು ಬಾರಿ ಸೂಚಿಸಿದ್ದರೂ ಯಾವುದೇ ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದವು ಎಂದು ತಿಳಿಸಿದ್ದಾರೆ.
ದ್ಮೊನ್ನೆ ಹೈಕೋರ್ಟ್, ಪಾರದರ್ಶಕ ಚುನಾವಣೆಯ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವ ಜೊತೆಗೆ ಮಂಡಳಿಯಲ್ಲಿರುವ ಹಣವನ್ನು ಸಿಬ್ಬಂಧಿ ವೇತನಕ್ಕೆ ಬಿಟ್ಟು ಬೇರೆ ವಿಷಯಗಳಿಗೆ ಖರ್ಚು ಮಾಡದಂತೆ ನಿರ್ದೇಶನ ನೀಡಿದೆ ಎಂದು ಅವರು ಮಾಹಿತಿ ಹಂಚಿಕೊಂಡರು,’
ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಅನೇಕ ಸದಸ್ಯರು ಕೂಡ ಪಾರದರ್ಶಕ ಚುನಾವಣೆ ನಡೆಸಿದ್ದರೆ ಮಾಹಿತಿ ನೀಡಿ ಎಂದು ಸಮಿತಿ ಸಭೆಯಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಮಾಹಿತಿ ನೀಡುತ್ತಿಲ್ಲ, ನೂತನ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಕರಿಸುಬ್ಬು, ಕೆ,ಎಂ ವೀರೇಶ್ ಮತ್ತಿತರಿದ್ದರು.