ವೇತನ ಹೆಚ್ಚಳ ಸ್ವಾಗತಾರ್ಹ-ಸಂಕನೂರ

ಧಾರವಾಡ ಮೇ.29-ರಾಜ್ಯದ ಗ್ರಾಮಪಂಚಾಯತಿಗಳಲ್ಲಿರುವ ಗ್ರಂಥಾಲಯ ಮೇಲ್ವಿಚಾರಕರು ಕಳೆದ 7-8 ವರ್ಷಗಳಿಂದ ವೇತನ ಹೆಚ್ಚಿಸುವ ಕುರಿತು ಮಾಡಿದ ಹೋರಾಟದ ಫಲವಾಗಿ ಸರ್ಕಾರ ಅವರ ಗೌರವಧನವನ್ನು ರೂ. 7000 ದಿಂದ ರೂ. 12000ಕ್ಕೆ ಹೆಚ್ಚಿಸಿ ಶ್ರೀಮತಿ ಉಮಾ ಮಹಾದೇವ£.À ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಇವರು ಆದೇಶ ಹೊರಡಿಸಿದ್ದು ಸ್ವಾಗತಾರ್ಹ ಹಾಗೂ ಅಭಿನಂದನೀಯ ಎಂದು ವಿ.ಪ.ಸದಸ್ಯ ಎಸ್.ವಿ. ಸಂಕನೂರ ಅವರು ತಿಳಿಸಿದ್ದಾರೆ.
ವೇತನ ಹೆಚ್ಚಿಸುವಲ್ಲಿ ವಿಶೇಷ ಆಸಕ್ತಿವಹಿಸಿ ಕಾರ್ಯ ಮಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ, ಕೆ. ಈಶ್ವರಪ್ಪ ಹಾಗೂ ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ, ಕೋಟ ಶ್ರೀನಿವಾಸ ಪೂಜಾರ ಅವರು ಅಭಿನಂದನಾರ್ಹರು. ಸರ್ಕಾರ “ಗ್ರಾಮಪಂಚಾಯತಿ ಗ್ರಂಥಾಲಯ” ದ ಹೆಸರನ್ನು “ಗ್ರಾಮಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ” ಎಂದು ಮರುನಾಮಕರಣ ಮಾಡಿ, ಅದರಂತೆ ಗ್ರಂಥಾಲಯ ಮೇಲ್ವಿಚಾರಕರ ಪ್ರತಿದಿನದ ಕಾರ್ಯಭಾರವನ್ನು 4 ಗಂಟೆಗಳಿಂದ 6 ಗಂಟೆಗಳಿಗೆ ಹೆಚ್ಚಿಸಿರುವರು. ಪ್ರತಿನಿತ್ಯದ ಕಾರ್ಯಭಾರವನ್ನು ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಹಾಗೂ ರವಿವಾರಗಳಂದು ಬೆಳಿಗ್ಗೆ 9 ರಿಂದ ಮ. 1 ಗಂಟೆವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಾ. 5 ರವರೆಗೆ ಅದರಂತೆ ಶನಿವಾರ ಬೆಳಿಗ್ಗೆ 10 ರಿಂದ 1, ಮಧ್ಯಾಹ್ನ 2 ರಿಂದ ಸಾ. 5 ವರೆಗೆ ವೇಳೆಯನ್ನು ನಿಗದಿಪಡಿಸಿರುವರು. ಸರ್ಕಾರದ ಈ ಆದೇಶದಿಂದ ರಾಜ್ಯದಲ್ಲಿರುವ ಸುಮಾರು 5633 ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಅನುಕೂಲವಾಗಲಿದೆ ಎಂದು ಸಂಕನೂರ ತಿಳಿಸಿದ್ದಾರೆ.