ವೇತನ ಹೆಚ್ಚಳ ಭರವಸೆ ನೌಕರರ ಮುಷ್ಕರ ಇಲ್ಲ: ಶ್ರೀರಾಮುಲು

ಬಳ್ಳಾರಿ,ಮಾ.೧೫-ಯುಗಾದಿ ಹಬ್ಬಕ್ಕೂ ಮುನ್ನಾ ದಿನವಾದ ಮಾ. ೨೧ ರಿಂದ ಸಾರಿಗೆ ನೌಕರರು ಅನಿರ್ದಿಷ್ಟಾವದಿ ಮುಷ್ಕರಕ್ಕೆ ಕರೆ ನೀಡಿರುವ ಬೆನ್ನಲ್ಲೇ ಹೇಳಿಕೆ ನೀಡಿರುವ ಸಾರಿಗೆ ಸಚಿವ ಬಿ. ಶ್ರೀರಾಮುಲು ನೌಕರರ ವೇತನ ಹೆಚ್ಚಳದ ಭರವಸೆ ನೀಡಿದ್ದು, ನೌಕರರು ಮುಷ್ಕರ ವಾಪಸ್ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ನಾನು ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದೇನೆ. ನೌಕರರ ಜತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದೇನೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವೇತನ ಹೆಚ್ಚಳದ ಬಗ್ಗೆ ಅಂತಿಮ ತೀರ್ಮಾನ ಮಾಡಲಾಗುವುದು. ಸಾರಿಗೆ ನೌಕರರು ಮುಷ್ಕರ ನಡೆಸುವುದಿಲ್ಲ ಎಂಬ ವಿಶ್ವಾಸವಿದೆ. ಪ್ರಯಾಣಿಕರಿಗೂ ಯಾವುದೇ ತೊಂದರೆಯಾಗಲ್ಲ ಎಂದರು.
ಹಣಕಾಸಿನ ಇತಿಮಿತಿಯಲ್ಲಿ ಸ್ವಲ್ಪ ವೇತನ ಹೆಚ್ಛಳ ಮಾಡುವ ಪ್ರಸ್ತಾವಕ್ಕೆ ಒಕ್ಕೂಟ ಒಪ್ಪಿಲ್ಲ ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡ್ತೇನೆ. ಒಕ್ಕೂಟದ ಜೊತೆ ಮಾತನಾಡಲು ಎಂ.ಡಿ ಅನ್ಬು ಕುಮಾರ ಈಗಾಗಲೇ ಹೇಳಿದ್ದೇನೆ. ಇವತ್ತು ಅಂತಿಮವಾದ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ವೇತನ ಪರಿಷ್ಕರಣೆ ಮಾಡೋದು ನಿಜ. ಹಣಕಾಸಿನ ಸ್ಥಿತಿಗತಿ ನೋಡಿ ಕೊಂಡು ಸ್ಪಲ್ಪ ಹೆಚ್ಚಳ ಮಾಡ್ತೇವೆ. ತೃಪ್ತಿಯಾಗೋ ರೀತಿ ಕ್ರಮ ಕೈಗೊಳ್ಳುತ್ತೇವೆ.
ಶ್ರೀರಾಮುಲು ಮಾತುಕೊಟ್ಟರೇ ಉಳಿಸಿಕೊಳ್ಳುತ್ತೇನೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಿದ್ದೇವೆ.ಅದೇರೀತಿ ಇವರದ್ದು ಮಾಡಲಿದೆ. ಮುಷ್ಕರಕ್ಕೆ ಹೋಗೋ ಪರಿಸ್ಥಿತಿ ಬರಲ್ಲ. ಸಾರಿಗೆ ನೌಕರರ ಮುಷ್ಕರದ ಹಿಂದೆ ಯಾರ ಕೈವಾಡ ಇಲ್ಲ ಎಂದರು.
ನೌಕರರ ಮರು ನೇಮಕ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಎಂಟಿಸಿಯಲ್ಲಿ ಕ್ರಿಮಿನಲ್ ಹಿನ್ನಲೆ ಇದ್ದವರು ಮಾತ್ರ ಕೆಲವರು ಉಳಿದಿದ್ದಾರೆ ಅವರನ್ನು ಕೂಡ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆಂದರು.