ವೇತನ ಹೆಚ್ಚಳಕ್ಕಾಗಿ ಎಐಟಿಯುಸಿ ಮನವಿ


ಜಗಳೂರು.ಜ.೧೫; ಪಟ್ಟಣದ ತಾಲೂಕು ಕಛೇರಿ ಮುಂಬಾಗ ವೇತನ ಹೆಚ್ಚಿಸಲು ಒತ್ತಾಯಿಸಿ ಎಐಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಕಾರ್ಯಕರ್ತರು ತಹಶೀಲ್ದಾರ್ ಮುಖಾಂತರ ಕೇಂದ್ರಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸಂಘಟನೆ ತಾಲೂಕು ಅಧ್ಯಕ್ಷ ಮಹಮ್ಮದ್ ಭಾಷಾ ಮಾತನಾಡಿ,ರಾಜ್ಯದಲ್ಲಿ ಮದ್ಯಾಹ್ನ ಉಪಹಾರ ಯೋಜನೆಯಡಿ ಕಳೆದ 19 ವರ್ಷ ಗಳಿಂದ ಸರಕಾರಿ ,ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಿಸಿಯೂಟ ತಯಾರಕರು ಕೆಲಸ ನಿರ್ವಹಿಸುತ್ತಿದ್ದು ಜೀವನ ಭದ್ರತೆಯಿಲ್ಲದೆ ನಲುಗುತ್ತಿದ್ದಾರೆ.ದಿನದಲ್ಲಿ 6 ತಾಸು ಕೆಲಸ ಮಾಡುತ್ತಿರುವ ಮುಖ್ಯ ಅಡುಗೆಯವರಿಗೆ ಮಾಸಿಕವಾಗಿ ಕೇವಲ ರೂ. 2700 ಸಹಾಯಕ ಅಡುಗೆಯವರಿಗೆ ರೂ.2600 ಮಾತ್ರ ಗೌರವಧನ ನೀಡಲಾಗುತ್ತಿದೆ.ಇದರಿಂದ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ.ಕೇಂದ್ರ ಸರ್ಕಾರ ಕೂಡಲೇ 2021-22 ರ ಬಜೆಟ್ ನಲ್ಲಿ ಕನಿಷ್ಠ ವೇತನ ಜಾರಿಗೊಳಿಸಬೇಕು.ಉತ್ತರ ಪ್ರದೇಶ ರಾಜ್ಯದ ಅಲಹಬಾದ್ ಹೈಕೋರ್ಟ್ ಆದೇಶಿಸಿರುವಂತೆ ಖಾಯಂಗೊಳಿಸಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.ಪ್ರಧಾನ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಮಾತನಾಡಿ,60 ವರ್ಷ ವಯೋಮಾನ ಮೀರಿ ನಿವೃತ್ತಿಯಾದವರಿಗೆ ರೂ. 2 ಲಕ್ಷ ಇಡಿಗಂಟು ನೀಡಬೇಕು.ಮಾಸಿಕ ಪಿಂಚಣಿ ರೂ.3 ಸಾವಿರ ಜಾರಿಗೊಳಿಸಬೇಕು.ಖಾಸಗಿ ಸಂಸ್ಥೆಯವರಿಗೆ ವಹಿಸುವ ನಿರ್ಧಾರ ಕೈಬಿಡಬೇಕು ಇಲ್ಲವಾದರೆ ಉಗ್ರ ಸ್ವರೂಪದ ಹೊರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳಾದ ಚನ್ನಮ್ಮ,ಮೀನಾಕ್ಷಿ,ವೀರಣ್ಣ,ತಿಪ್ಪೇಸ್ವಾಮಿ,ವೀಣಾ,ಉಮಾದೇವಿ,ರತ್ನಮ್ಮ,ಸರೋಜ,ಸುಮ,ಸೇರಿದಂತೆ ಭಾಗವಹಿಸಿದ್ದರು.

ReplyReply to allForward