ವೇತನ ವಿಳಂಬ-ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕೋಲಾರ,ಮಾ.೧೬: ೨೦೧೫ ರಿಂದ ೨೦೨೦ ರವರೆಗಿನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದ ಸದಸ್ಯರಿಗೆ ವೇತನ ನೀಡದೆ ವಂಚಿಸಿರುವ ಅಧಿಕಾರಿಗಳ ವಿರುದ್ಧ, ಜಿಲ್ಲಾ ಪಂಚಾಯತಿ ಸಿ.ಇ.ಓ ಅವರು ತನಿಖೆಯನ್ನು ನಡೆಸಿ ತಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಸೇನೆಯ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಆಗ್ರಹಿಸಿದ್ದಾರೆ. ಜಿಲ್ಲೆಯ ಕೆಲವೊಂದು ಗ್ರಾಮ ಪಂಚಾಯತಿಗಳಲ್ಲಿ ಸದಸ್ಯರಿಗೆ ನೀಡಬೇಕಿದ್ದ ತಿಂಗಳ ವೇತನವನ್ನು ನೀಡದೆ ವಂಚಿಸಿರುವ ಪಿಡಿಓಗಳ ವಿರುದ್ಧ ಕೂಲಂಕಶವಾಗಿ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ವಿಚಾರದಲ್ಲಿ ಪಿಡಿಓ ಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಅನುದಾನವನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯತಿಯ ೧೪-೧೫ನೇ ಹಣಕಾಸು ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆಯಾಗಿದ್ದು, ಈ ಹಣವನ್ನು ಅಧಿಕಾರಿಗಳು ಲೆಕ್ಕ ನೀಡದೆ ಪಟಾಯಿಸಿರುತ್ತಾರೆ. ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳು ಗ್ರಾಮಗಳಲ್ಲಿ ಯಾವ ಮೂಲಸೌಲಭ್ಯಕ್ಕೆ ಅನುದಾನವನ್ನು ಖರ್ಚು ಮಾಡಿದ್ದಾರೆ ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಜಿಲ್ಲಾ ಪಂಚಾಯತಿ ಸಿ.ಇ.ಓ ಹಾಗೂ ತಾಲೂಕು ಪಂಚಾಯತಿ ಇ.ಓ ಅವರನ್ನು ಒತ್ತಾಯಿಸಿದ್ದಾರೆ.