ವೇತನ ಭತ್ಯ ಪರಿಷ್ಕರಣೆ: ಮಾ 1 ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ

ಭಾಲ್ಕಿ:ಫೆ.24: ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆಗ್ರಹಿಸಿ ಮಾ. 1 ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೆಪ್ಪ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಸಭಾ ಭವನದಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಮಾ. 1 ರಂದು ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಲು 8 ಸಾವಿರ ಚುನಾಯಿತ ಪ್ರತಿನಿಧಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಪ್ರಸ್ತುತ ಸಲಿನ ಆಯವ್ಯಯದಲ್ಲಿ ಸರ್ಕಾರಿ ನೌಕರರ ವೇತನ ಭತ್ಯಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡದಿರುವುದು ಸಹಜವಾಗಿಯೇ ನೌಕರರಲ್ಲಿ ನಿರಾಶೆ ಮೂಡಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯ ಜುಲೈ 2022 ರಿಂದಲೇ ಜಾರಿಗೊಳಿಸಬೇಕಾಗಿತ್ತು. ಆದರೆ ವೇತನ ಆಯೋಗ ಸುಧಾಕರರಾವ ಅಧ್ಯಕ್ಷತೆಯಲ್ಲಿ ರಚನೆ ಮಾಡಿದ್ದೂ, ಸರ್ಕಾರಕ್ಕೆ ವಿಸ್ತ್ರುತ ವರದಿ ಸಲ್ಲಿಸಿದರೂ ಸರ್ಕಾರ ಈ ಬಗ್ಗೆ ಆಯವ್ಯಯದಲ್ಲಿ ಯಾವುದೇ ಪ್ರಸ್ತಾಪ ಮಾಡದಿರುವುದು ಸರ್ಕಾರಿ ನೌಕರರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ರಾಜ್ಯದ ಎನ್.ಪಿ.ಎಸ್ ನೌಕರರ ಜೀವನ ನಿರ್ವಹಣೆ ಹಾಗು ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಬೇರೆ ರಾಜ್ಯಗಳಲ್ಲಿ ಜಾರಿ ಮಾಡಿರುವುಂತೆ ನಮ್ಮ ರಾಜ್ಯದಲ್ಲಿಯೂ ಎನ್‍ಪಿಎಸ್ ರದ್ದು ಪಡಿಸಿ ಓಪಿಎಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಸದನದಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡರೂ ತಕ್ಷಣವೇ ಸರ್ಕಾರಿ ಆದೇಶ ಹೊರಡಿಸಬೇಕು. 7ನೇ ವೇತನ ಆಯೋಗ ರಚನೆ ಮತ್ತು ಎನ್.ಪಿ.ಎಸ್ ರದ್ದತಿ ಬಗ್ಗೆ ಸರ್ಕಾರಿ ಆದೇಶ ಹೊರಡಿಸಿದರೆ ಮಾತ್ರ ಮಾ. 1 ರಿಂದ ನಡೆಸಲು ನಿರ್ಧರಿಸಿರುವ ಅನಿರ್ಧಿಷ್ಠಾವಧಿ ಕಾಲದ ಮುಷ್ಕರ ಕೈಬಿಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಆದ್ಯಕ್ಷ ದತ್ತು ಕಾಟಕರ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸುನೀಲ ಬಿರಾದಾರ, ಉಪಾಧ್ಯಕ್ಷ ಶಿವಕುಮಾರ ಹುಗಾರ, ಖಜಾಂಚಿ ರಮೇಶ ಬೋಗಾರ, ಸಹದೇವ.ಜಿ, ಅಶೋಕ ಕುಂಬಾರ ಉಪಸ್ಥಿತರಿದ್ದರು.