ವೇತನ ಬಟವಾಡೆ ವಿಳಂಬ ನಿವಾರಣೆಗೆ ಕ್ರಮ

ಕೋಲಾರ,ಮಾ.೨೪: ಜಿಲ್ಲಾ ಖಜಾನೆಯಲ್ಲಿ ವೇತನ ವಿಳಂಬದ ಕುರಿತು ರಾಜ್ಯ ಖಜಾನೆ ನಿರ್ದೇಶಕರ ಸ್ವಷ್ಟ ಭರವಸೆ, ಜಿಲ್ಲಾಧಿಕಾರಿಗಳ ಸಲಹೆ ಹಾಗೂ ಜಿಲ್ಲಾ ಖಜಾನಾಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಲಿರುವ ಕ್ರಮಗಳ ಕುರಿತು ಪತ್ರ ನೀಡಿರುವ ಹಿನ್ನಲೆಯಲ್ಲಿ, ನಾಳೆ ಕರೆ ನೀಡಿದ್ದ ಖಜಾನೆ ಮುತ್ತಿಗೆ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ರಾಜ್ಯ ಖಜಾನೆ ನಿರ್ದೇಶಕರೇ ಖುದ್ದು ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ಸ್ವಷ್ಟ ಭರವಸೆ ನೀಡಿ ಧರಣಿ ಬೇಡ ಎಂದು ಸೂಚಿಸಿರುವ ಹಿನ್ನಲೆಯಲ್ಲಿ ಪ್ರತಿಭಟನೆ ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಜಿಲ್ಲಾ ಸಂಘಕ್ಕೆ ಕರೆ ಮಾಡಿ, ಸಮಸ್ಯೆ ಪರಿಹಾರಕ್ಕೆ ಖಜಾನೆ ಇಲಾಖೆ ಒಪ್ಪಿರುವುದರಿಂದ ಪ್ರತಿಭಟನೆ ಬೇಡ ಎಂದು ಸೂಚಿಸಿದ್ದು, ಮುಂದೆ ಸಮಸ್ಯೆ ಪರಿಹಾರವಾಗದಿದ್ದರೆ ರಾಜ್ಯ ಸಂಘವೇ ಈ ಸಂಬಂಧ ಕ್ರಮವಹಿಸಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ನೌಕರರ ಸಂಘದ ಅಧ್ಯಕ್ಷರನ್ನು ಕರೆಸಿಕೊಂಡು ಸಮಸ್ಯೆ ಕುರಿತು ಆಲಿಸಿದ್ದಲ್ಲದೇ ಸೂಕ್ತ ಪರಿಹಾರಕ್ಕೆ ಖಜಾನಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿ ಪ್ರತಿಭಟನೆ ವಾಪಸ್ಸಿಗೆ ಸಲಹೆ ನೀಡಿದ್ದಾರೆ.ಅದೇ ರೀತಿ ಪ್ರತಿಭಟನೆ ಕೈಬಿಡುವಂತೆ ಕೋರಿ ತಮಗೆ ಪತ್ರ ಬರೆದಿರುವ ಜಿಲ್ಲಾ ಖಜಾನಾಧಿಕಾರಿಗಳು, ನೌಕರರಿಗೆ ತೊಂದರೆಯಾಗದಂತೆ ವೇತನ ಬಟವಾಡೆಗೆ ಅಗತ್ಯ ಕ್ರಮವಹಿಸುವ ಭರವಸೆ ನೀಡಿದ್ದಾರೆ.
ಜೊತೆಗೆ ಪ್ರತಿ ಇಲಾಖೆಯ ಡ್ರಾಯಿಂಗ್ ಅಧಿಕಾರಿಗಳು ಪ್ರತಿಮಾಹೆ ೨೦ ರಂದೇ ಹೆಚ್‌ಆರೆಂಎಸ್ ತಂತ್ರಾಂಶದಲ್ಲಿ ವೇತನ ಬಿಲ್ಲುಗಳನ್ನ ಸಿದ್ದಪಡಿಸಲು ಸರ್ಕಾರ ಅವಕಾಶ ನೀಡಿದ್ದು, ಕನಿಷ್ಟ ಪ್ರತಿ ತಿಂಗಳ ೨೬ ನೇ ದಿನಾಂಕದೊಳಗೆ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ಕೋರಿದ್ದಾರೆ ಎಂದು ತಿಳಿಸಿದ್ದಾರೆ.
ಆರ್ಥಿಕ ವರ್ಷದ ಅಂತ್ಯವಾಗಿದ್ದು, ಜತೆಗೆ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸುವ ದಿನಾಂಕವನ್ನು ಸರ್ಕಾರ ವಿಸ್ತರಿಸುತ್ತಿರುವ ಹಿನ್ನಲೆಯಲ್ಲಿ ಖಜಾನೆಗೆ ಬರುವ ಸ್ವೀಕೃತಿ ಬಿಲ್ಲುಗಳ ಸಂಖ್ಯೆಯೂ ಹೆಚ್ಚಿದೆ ಎಂದು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.
ಖಜಾನೆ ಆಯುಕ್ತರ ಆದೇಶದ ಹಿನ್ನಲೆಯಲ್ಲಿ ಜಿಲ್ಲಾ ಖಜಾನೆಯಲ್ಲಿ ಬಿಲ್ಲುಗಳ ಬಡವಾಡೆ ವಿಳಂಬ ತಪ್ಪಿಸಲು ತಾಲ್ಲೂಕು ಉಪಖಜಾನೆಗಳಿಂದ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ವರ್ಷಾಂತ್ಯದ ಬಿಲ್ಲುಗಳನ್ನು ತೀರ್ಣಗೊಳಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಖಜಾನೆಯಲ್ಲಿ ವೇತನ, ಪಿಂಚಣಿ ಬಿಲ್ಲುದಾರರು ಮಾಹಿತಿ ಪಡೆಯಲು ಪ್ರತ್ಯೇಕ ಎರಡು ಸಹಾಯವಾಣಿ ತೆರೆಯಲಾಗಿದೆ, ಅದೇರೀತಿ ಡಿಎಸ್‌ಇ ಕೀಗೆ ಸಂಬಂಧಿಸಿದಂತೆಯೂ ಖಜಾನೆ ಆಯುಕ್ತರ ಸೂಚನೆಯಂತೆ ಡಿಎಸ್‌ಇ ನವೀಕರಿಸಲು ಅನುವಾಗುವಂತೆ ಪ್ರತ್ಯೇಕ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಖಜಾನಾಧಿಕಾರಿಗಳು ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಿಗೆ ನೀಡಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಇಲಾಖೆಯ ಆಯುಕ್ತರ ಸೂಚನೆಯಂತೆ ಬಿಲ್ಲುಗಳನ್ನು ತೀರ್ಣಗೊಳಿಸಲು ಕಚೇರಿ ಸಮಯದ ನಂತರವೂ ಹೆಚ್ಚಿನ ಸಮಯ ಕಾರ್ಯನಿರ್ವಹಿಸಲಾಗುತ್ತಿದೆ, ನೌಕರರಿಗೆ ಸಹಕಾರ ನೀಡಲು ಖಜಾನೆ ಸಿದ್ದವಿದ್ದು, ಧರಣಿ ಕೈಬಿಡಲು ಮನವಿ ಮಾಡಿದ್ದಾರೆ ಎಂದು ಸುರೇಶ್‌ಬಾಬು ತಿಳಿಸಿದ್ದಾರೆ.
ಒಟ್ಟಾರೆ ನೌಕರರ ವೇತನ ಬಟವಾಡೆ ವಿಳಂಬ ತಪ್ಪಿಸಲು ಸ್ವಷ್ಟ ಭರವಸೆ ನೀಡಿರು ಖಜಾನೆ ನಿರ್ದೇಶಕರು, ಜಿಲ್ಲಾಧಿಕಾರಿಗಳು, ಖಜಾನಾಧಿಕಾರಿಗಳಿಗೆ ಜಿಲ್ಲೆಯ ಸಮಸ್ತ ನೌಕರರ ಪರವಾಗಿ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು,ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಧನ್ಯವಾದ ಸಲ್ಲಿಸಿದ್ದಾರೆ.