ವೇತನಕ್ಕಾಗಿ ವಸತಿ ಶಾಲಾ ಕಾರ್ಮಿಕರಿಂದ ಆನ್‌ಲೈನ್ ಪ್ರತಿಭಟನೆ

ದಾವಣಗೆರೆ.ಮೇ.೨೭; ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಗೆ ಒಳಪಡುವ ಹಾಸ್ಟೆಲ್ ಮತ್ತು ವಸತಿಶಾಲೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಮರ್ಪಕ ವೇತನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ(ರಿ),ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ಹಾಸ್ಟೆಲ್ ಕಾರ್ಮಿಕರು ಮನೆಗಳಿಂದಲೇ ಆನ್‌ಲೈನ್ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದರು.ಸುಮಾರು 25 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಳೆದ 17-20 ವರ್ಷಗಳಿಂದಲೂ ಕನಿಷ್ಟ ಕೂಲಿಯೂ ಇಲ್ಲದೇ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅಡುಗೆ ಮಾಡಿ ಅನ್ನ ನೀಡುವ ಮಹತ್ವದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಕಾರ್ಮಿಕರಲ್ಲಿ ಬಹುತೇಕರು ಕನಿಷ್ಟ ಇಎಸ್‌ಐ ಮತ್ತು ಪಿಎಫ್ ಸೌಲಭ್ಯಗಳಿಂದಲೂ ಸಹ ವಂಚಿತರಾಗಿರುವ ಕುರಿತು ಈ ಹಿಂದೆ ಹಲವಾರು ಬಾರಿ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಕಳೆದ ಬಾರಿಯ ಲಾಕ್‌ಡೌನ್ ಅವಧಿಯ ವೇತನವನ್ನು ನೀಡಬೇಕೆಂಬ ಅರ್ಥಿಕ ಇಲಾಖೆ ಆದೇಶವಿದ್ದರೂ ಇದುವರೆಗೂ ಬಹುತೇಕ ಕಾರ್ಮಿಕರಿಗೆ ನೀಡಿರುವುದಿಲ್ಲ. ಈ ಕುರಿತು ಹಲವಾರು ಪ್ರತಿಭಟನೆಗಳನ್ನು ಮಾಡಿ ಮನವಿ ಮಾಡಿದ್ದರೂ ಕೇವಲ ಆಶ್ವಾಸನೆಗಳನ್ನು ನೀಡುತ್ತಾ ಅಧಿಕಾರಿಗಳು ಕಾಲಹರಣ ಮಾಡುತ್ತಾ ಬಂದಿದ್ದಾರೆ. ಇವರ ಕೆಲಸಗಳು ಖಾಯಂ ಸ್ವರೂಪದ ಕೆಲಸಗಳಾಗಿದ್ದರೂ ಇವರನ್ನು ಖಾಯಂಗೊಳಿಸದೇ ಕನಿಷ್ಟ ಕೂಲಿ ದುಡಿಸಿಕೊಂಡು ಪ್ರತಿ ವರ್ಷ ನೂರಾರು ಕೋಟಿ ಹಣವನ್ನು ಸರ್ಕಾರವು ಉಳಿಸಿಕೊಳ್ಳುತ್ತಾ ಶೋಷಣೆ ಮಾಡುತ್ತಿದೆ. ಕನಿಷ್ಟ ಕೂಲಿಯೂ ಇಲ್ಲದೇ ಸರ್ಕಾರಕ್ಕೆ ಸೇವೆ ಸಲ್ಲಿಸಿ ಇಂತ ಕಾರ್ಮಿಕರಿಗೆ ಕೋವಿಡ್-19 ನಂತಹ ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವ ಸಂಧರ್ಭದಲ್ಲಿ ಕೈ ಹಿಡಿಯದಿರುವುದು ಖಂಡನೀಯ. ಈ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.