ವೆಲ್ಲೂರಿನಿಂದ ಕರೆತಂದ ಮತ್ತೊಬ್ಬ ಉಗ್ರ ಆದಿಲ್‌ಗೆ ಸಿಸಿಬಿ ಡ್ರಿಲ್

ಬೆಂಗಳೂರು,ಜು.೨೬-ಶಂಕಿತ ಉಗ್ರ ಅಖ್ತರ್ ಹುಸೇನ್ ಜೊತೆ ಸಂಪರ್ಕದಲ್ಲಿದ್ದ ಜುಬಾ ಅಬ್ದುಲ್ ಅಲಿ ಮಂಡಲ್ ಅಲಿಯಾಸ್ ಆದಿಲ್ ನನ್ನು ತಮಿಳುನಾಡಿನಿಂದ ಕರೆದು ತಂದಿರುವ ಸಿಸಿಬಿ ಪೊಲೀಸರು ನಗರಕ್ಕೆ ವಿಚಾರಣೆ ನಡೆಸುತ್ತಿದ್ದಾರೆ.
ತಮಿಳುನಾಡಿನ ವೆಲ್ಲೂರು ಬಳಿ ನಿನ್ನೆ ತಡರಾತ್ರಿಯೇ ಅದಿಲ್ ನನ್ನು ಬಂಧಿಸಿ ನಗರಕ್ಕೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸಿ ಸಂಜೆಯೊಳಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ತಮಿಳುನಾಡಿನಲ್ಲಿ ಬಂಧಿತ ಅದಿಲ್ ಕೂಡ ಅಸ್ಸಾಂ ಮೂಲದವನಾಗಿದ್ದು, ಬಂಧಿತ ಅಖ್ತರ್ ಹುಸೇನ್ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದ ಎನ್ನುವುದು ವಿಚಾರಣೆ
ಯಲ್ಲಿ ಪತ್ತೆಯಾಗಿದೆ.
ಬಂಧಿತ ಅಖ್ತರ್ ಹುಸೇನ್ ಹಾಗೂ ಅದಿಲ್ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಚಟುವಟಿಕೆಗೆ ಯುವಕರನ್ನು ಪ್ರೇರೇಪಣೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಬಂಧಿತನ ಮೊಬೈಲ್ ಫೋನ್ ಡೇಟಾ ಮತ್ತು ಚಾಟಿಂಗ್ ರಿಟ್ರೀವ್ ಮಾಡುತ್ತಿದ್ದಾರೆ.
ಎನ್‌ಐಎನಿಂದ ವಿಚಾರಣೆ:
ಉಗ್ರ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಶಂಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ತಂಡ ಬಂಧಿತ ಶಂಕಿತ ಉಗ್ರನನ್ನು ವಿಚಾರಣೆ ನಡೆಸಿದೆ. ನಿನ್ನೆ ಮಧ್ಯಾಹ್ನದವರೆಗೂ ಎನ್‌ಐಎ ತಂಡ ಶಂಕಿತ ಉಗ್ರನನ್ನು ವಿಚಾರಣೆಗೆ ಒಳಪಡಿಸಿದೆ.
ಅಖ್ತರ್ ಹುಸೇನ್ ಜೊತೆ ಆತನ ತಮ್ಮ ಕೂಡ ರೂಂನಲ್ಲಿ ವಾಸವಿದ್ದ. ಹೀಗಾಗಿ ಆತನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ಆತನ ರೂಂನಲ್ಲಿ ಆತನ ಜೊತೆಗಿದ್ದ ನಾಲ್ವರು ಯುವಕರನ್ನು ವಿಚಾರಣೆ ನಡೆಸಿ, ಬಿಡಲಾಗಿದೆ ಅಂತ ಮೂಲಗಳು ತಿಳಿಸಿವೆ.
ಆಲ್ ಖೈದಾ ಉಗ್ರ ಸಂಘಟನೆ ಸೇರಿದಂತೆ ಬೇರೆ ಬೇರೆ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.