ವೆಬಿನಾರ್ ಮೂಲಕ ಈ.ಕ.ರ.ಸಾ.ಸಂಸ್ಥೆಯ ನೌಕರರಿಗೆ ಕೋವಿಡ್-19 ಕುರಿತು ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮ

ಕಲಬುರಗಿ,ಜೂ.9:ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕೋವಿಡ್-19 ಸೋಂಕನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಹಾಗೂ ಅಳವಡಿಸಿಕೊಳ್ಳಬೇಕಾದ ಜೀವನ ಶೈಲಿಯ ಕುರಿತು ಕಲಬುರಗಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ವೆಬಿನಾರ್ (WEBINAR) ಮೂಲಕ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಸೇಡಂ ಶಾಸಕರು ಹಾಗೂ ಈ.ಕ.ರ.ಸಾ.ಸಂಸ್ಥೆ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೆಲ್ಕೂರ ಅವರು ಬುಧವಾರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ಕೋವಿಡ್-19 ಸೋಂಕು ತಡೆಯಲು ಸಂಸ್ಥೆಯು ತೆಗೆದುಕೊಂಡಿರುವ ಮನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದಲ್ಲದೇ ಸಂಸ್ಥೆಯ ಸಿಬ್ಬಂದಿಗಳಿಗಾಗಿ ಹಾಗೂ ಸಾರ್ವಜನಿಕರಿಗಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ವಿವರಿಸಿದರು. ಇದಲ್ಲದೇ ಸಿಬ್ಬಂದಿಗಳಿಗೆ ಧೈರ್ಯ ತುಂಬಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳಾದ ಡಾ. ಅನೀಲಕುಮಾರ ತಾಳಿಕೋಟೆ ಅವರು ಬೆಂಗಳೂರಿನಿಂದ ವೆಬಿನಾರ್ (WEBINAR) ಮೂಲಕ ಸಂಸ್ಥೆಯ 9 ವಿಭಾಗಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 850 ಸಿಬ್ಬಂದಿಗಳಿಗೆ ಕೋವಿಡ್-19ಸೋಂಕನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಮತ್ತು ಅಳವಡಿಸಿಕೊಳ್ಳಬೇಕಾದ ಜೀವನ ಶೈಲಿಯ ಕುರಿತು ಮಾತನಾಡಿದರು. ತದನಂತರ ಸಿಬ್ಬಂದಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ.ಎಮ್. ಸೇರಿದಂತೆ ಸಂಸ್ಥೆಯ ಇಲಾಖಾ ಮುಖ್ಯಸ್ಥರು ಉಪಸ್ಥಿತರಿದ್ದರು.