ವೆಜ್ ಸ್ಪ್ರಿಂಗ್ ರೋಲ್ ಮಾಡುವ ವಿಧಾನ

ಈ ರೀತಿಯ ತಿಂಡಿಗಳನ್ನು ನೀವು ಮನೆಯಲ್ಲೇ ಶುಚಿಯಾಗಿ, ರುಚಿಯಾಗಿ ಮಾಡಿ ಮನೆಮಂದಿಗೆಲ್ಲಾ ತಿನಿಸಿ, ಅವರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಳ್ಳುವುದಂತೂ ಗ್ಯಾರೆಂಟಿ. ಊಟದಲ್ಲಿ ತರಕಾರಿಯನ್ನು ತಿನ್ನಲು ನಿರಾಕರಿಸುವಂತಹ ಮಕ್ಕಳಿಗೆ ಇದನ್ನು ಮಾಡಿಕೊಟ್ಟರೆ, ಅವರು ಇಷ್ಟ ಪಟ್ಟು ಈ ತಿಂಡಿಯನ್ನು ತಿನ್ನುವುರಲ್ಲದೆ, ತರಕಾರಿಯೂ ಅವರ ಹೊಟ್ಟೆ ಸೇರಿದಂತಾಗುತ್ತದೆ.

ಬೇಕಾಗುವ ಸಾಮಾಗ್ರಿಗಳು:
ಸ್ಪ್ರಿಂಗ್ ರೋಲ್ ರ್ಯಾಪರ್ಸ್ (ಶೀಟ್ಸ್) -೬
ಕ್ಯಾರೆಟ್- ೧ ದೊಡ್ಡದು
ಸಣ್ಣ ಎಲೆಕೋಸು (ಕ್ಯಾಬೇಜ್) -ಅರ್ಧ
ದಪ್ಪ ಮೆಣಸಿನಕಾಯಿ- ೧ದೊಡ್ಡದು
ಈರುಳ್ಳಿ- ೧ ದೊಡ್ಡದು
ಈರುಳ್ಳಿ ಹೂ(ಸ್ಪ್ರಿಂಗ್ ಆನಿಯನ್)- ೫-೬
ಬಿಳಿ ಕಾಳು ಮೆಣಸಿನ ಪುಡಿ(ಪೆಪ್ಪರ್) ? ಅರ್ಧ ಚಮಚ
ಸೋಯ ಸಾಸ್- ೨ ಚಮಚ
ಮೈದಾ ಹಿಟ್ಟು /ಕಾರ್ನ್‌ಫ್ಲೋರ್ -೨ ಚಮಚ
ಕರಿಯಲು ಎಣ್ಣೆ
ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಕ್ಯಾರೆಟನ್ನು ತೊಳೆದು, ಮೇಲಿನ ಸಿಪ್ಪೆ ತೆಗೆದು ತುಂಬಾ ತೆಳ್ಳಗೆ, ಉದ್ದುದ್ದಕ್ಕೆ ಕತ್ತರಿಸಿಕೊಳ್ಳಿ. ಹಾಗೆಯೇ ಎಲೆಕೋಸನ್ನೂ ಅತೀ ಉದ್ದಗೆ ತೆಳ್ಳಗೆ ಕತ್ತರಿಸಿ ನೀರಿಗೆ ಹಾಕಿ ತೊಳೆದು ನೀರು ಬಸಿಯಲು ಇಡಿ. ಈರುಳ್ಳಿ ಮತ್ತು ದಪ್ಪ ಮೆಣಸಿನ ಕಾಯಿಯನ್ನು (ಕ್ಯಾಪ್ಸಿಕಂ) ಉದ್ದಗೆ, ಸಾಧ್ಯವಾದಷ್ಟು ತೆಳ್ಳಗೆ ಕತ್ತರಿಸಿಕೊಳ್ಳಿ. ಈರುಳ್ಳಿ ಹೂಗಳನ್ನು ತೆಳ್ಳಗೆ, ಸಣ್ಣದಾಗಿ ಕತ್ತರಿಸಿ.

ಈಗ ಫ್ರೈಯಿಂಗ್ ಪ್ಯಾನ್‌ಗೆ ೨ ಚಮಚ ಎಣ್ಣೆ ಹಾಕಿ, ಕಾದಾಗ ತೆಳ್ಳಗೆ ಹೆಚ್ಚಿದ ಈರುಳ್ಳಿ ಹಾಕಿ ಎರಡು ನಿಮಿಷ ಹುರಿಯಿರಿ. ನಂತರ ಕತ್ತರಿಸಿದ ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಎಲೆಕೋಸನ್ನು ಹಾಕಿ ಮದ್ಯಮ ಉರಿಯಲ್ಲಿ ಫ್ರೈ ಮಾಡಿ. ಎಲ್ಲಾ ತರಕಾರಿಗಳೂ ಮೆತ್ತಗಾಗುವವರೆಗೆ (ನೀರು ಹಾಕದೆ) ಸಣ್ಣ ಉರಿಯಲ್ಲಿ ಬೇಯಿಸಿ.

ಈಗ ಕಾಳು ಮೆಣಸಿನ ಪುಡಿ, ಉಪ್ಪು ಮತ್ತು ಎರಡು ಚಮಚ ಸೋಯಾ ಸಾಸ್ ಹಾಕಿ ಚೆನ್ನಾಗಿ ಕೈ ಆಡಿಸಿ ಸ್ಟವ್ ಆರಿಸಿ. ಅದನ್ನು ತಣಿಯಲು ಬಿಡಿ. ಎರಡು ಚಮಚ ಮೈದಾ ಹಿಟ್ಟಿಗೆ/ ಕಾರ್ನ್‌ಫ್ಲೋರ್ ಗೆ ನಾಲ್ಕು ಚಮಚದಷ್ಟು ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.ನಂತರ, ಫ್ರೈಯಿಂಗ್ ಪ್ಯಾನ್‌ಗೆ ಎಣ್ಣೆ ಹಾಕಿ ಅದನ್ನು ಕಾಯಲು ಬಿಡಿ.ಆ ಸಮಯದಲ್ಲಿ ನೀವು ಸ್ಪ್ರಿಂಗ್ ರೋಲ್ ಶೀಟ್‌ನ್ನು ಹರಡಿ, ಅದರ ಒಂದು ಭಾಗಕ್ಕೆ ಎರಡು ಚಮಚದಷ್ಟು ಮೇಲೆ ಮಾಡಿಟ್ಟ ತಣಿದ ಪಲ್ಯವನ್ನು ಹಾಕಿ.

ಶೀಟ್‌ನ ಎಡ-ಬಲ ಭಾಗದಲ್ಲಿ ಒಂದೊಂದು ಇಂಚು ಜಾಗ ಬಿಟ್ಟಿದ್ದು, ಅದನ್ನು ಮಡಿಸಿ, ಅದಕ್ಕೆ ಮೈದಾ ಪೇಸ್ಟ್‌ನ್ನು ಸವರಿ. ಈಗ ಶೀಟ್‌ನ ಜೊತೆಯಲ್ಲೇ ಹರಡಿದ ಪಲ್ಯದ ಭಾಗವನ್ನು ಒಳಗೆ ಸೇರಿಸುತ್ತಾ ಬಿಗಿಯಾಗಿ (ಟೈಟ್) ರೋಲ್ ಮಾಡುತ್ತಾ ಹೋಗಿ. ಆಚೀಚೆ ಇರುವ ಮಡಿಸಿದ ಕೊನೆಯ ಭಾಗಕ್ಕೆ ಸ್ವಲ್ಪ ಮೈದಾ ಪೇಸ್ಟ್‌ನ್ನು ಸವರಿ ಶೀಟ್‌ನ್ನು ಬಿಗಿಯಾಗಿ ಮಡಿಸಿ (ರೋಲ್ ಮಾಡಿ) ಮೃದುವಾಗಿ ಒತ್ತಿ ಬದಿಯಲ್ಲಿಡಿ.

ಮೈದಾ ಪೇಸ್ಟ್ ಹಾಕಿರುವುದರಿಂದ, ಹಾಗೂ ಶೀಟ್ ಅಷ್ಟು ಸುಲಭವಾಗಿ ಹರಿಯದೇ ಇರುವುದರಿಂದ ನಿರಾತಂಕವಾಗಿ ನೀವು ರೋಲ್ ಮಾಡಬಹುದು. ಎಣ್ಣೆ ಕಾದಾಗ, ಎರಡೆರಡು ರೋಲ್ ಗಳನ್ನು ಒಟ್ಟ್ಟಿಗೇ ಎಣ್ಣೆಗೆ ಬಿಟ್ಟು ಹೊಂಬಣ್ಣ ಬರುವವರೆಗೆ ಮೊದಲು ೨-೩ ನಿಮಿಷ ದೊಡ್ಡ ಉರಿಯಲ್ಲಿ, ನಂತರ ಸಣ್ಣ ಉರಿಯಲ್ಲಿ ಕರಿಯಿರಿ. ರುಚಿಯಾದ, ಬಲು ಗರಿಗರಿಯಾದ ವೆಜ್ ಸ್ಪ್ರಿಂಗ್ ರೋಲ್ ಸವಿಯಲು ಸಿದ್ಧ. ಅದನ್ನು ಚಾಕುವಿನ ಸಹಾಯದಿಂದ ೨-೩ ಪೀಸ್ ಮಾಡಿ ಟೊಮೊಟೊ ಸಾಸ್ ಜೊತೆಯಲ್ಲಿ ಸರ್ವ್ ಮಾಡಿ.