ವೆಜಿಟೆಬಲ್ ಫ್ರೈಡ್ ರೈಸ್

ಮಸಾಲೆ ಪದಾರ್ಥಗಳನ್ನು ಬಳಸದೆ ಬಲು ಸರಳವಾಗಿ ಆದರೆ ಅಷ್ಟೇ ಸ್ವಾದಿಷ್ಟವಾಗಿ ತಯಾರಿಸುವಂತಹಾ ಈ ವೆಜಿಟೆಬಲ್ ಫ್ರೈಡ್ ರೈಸ್ ಮದ್ಯಾಹ್ನದ ಹಾಗೂ ರಾತ್ರಿಯ ಊಟಕ್ಕೆ ಅಷ್ಟೇ ಅಲ್ಲ, ಪಾರ್ಟಿಗಳಿಗೆ, ಲಂಚ್ ಬಾಕ್ಸ್ ಗೆ ಬಹಳ ಸೂಕ್ತವಾಗಿದೆ ಎನ್ನಬಹುದು. ಮಸಾಲೆ ಪದಾರ್ಥಗಳನ್ನು ಇಷ್ಟ ಪಡದವರಿಗೆ ಮತ್ತು ತರಕಾರಿಗಳನ್ನು ಚೆನ್ನಾಗಿ ಬಳಸಿರುವುದರಿಂದ ಬೆಳೆಯುವ ಮಕ್ಕಳಿಗೆ ಇದು ಅತ್ಯಂತ ಸೂಕ್ತವಾದ ಬಾತ್ ಎನ್ನಬಹುದು.

ಬೇಕಾಗುವ ಪದಾರ್ಥಗಳು:
ಬಾಸ್ಮತಿ ಅಕ್ಕಿ-೨ ಮೀಡಿಯಂ ಲೋಟ
ಬೀನ್ಸ್- ೧೦-೧೨
ಕ್ಯಾರೆಟ್- ೨ ಸಣ್ಣದು
ದೊಡ್ಡ ಮೆಣಸಿನ ಕಾಯಿ- ೧ ದೊಡ್ಡದು
ಈರುಳ್ಳಿ- ೨
ಈರುಳ್ಳಿ ಹೂ(ಸ್ಪ್ರಿಂಗ್ ಆನಿಯನ್)- ಅರ್ಧ ಕಟ್ಟು
ಕಾಳು ಮೆಣಸು(ಪೆಪ್ಪರ್) ? ೧ ಚಮಚ
ನಿಂಬೆ ಹಣ್ಣು- ಅರ್ಧ
ಸೋಯಾ ಸಾಸ್- ೩ ಚಮಚ
ಎಣ್ಣೆ- ೩ ಚಮಚ
ಉಪ್ಪು- ರುಚಿಗೆ

ಮಾಡುವ ವಿಧಾನ:
ಮೇಲೆ ಹೇಳಿದಂತಹ ತರಕಾರಿಗಳನ್ನು ತುಂಬಾ ಸಣ್ಣದಾಗಿ ಹೆಚ್ಚಿಕೊಂಡು ಬೇರೆ ಬೇರೆಯಾಗಿ ತೆಗೆದಿಡಿ. ಕಾಳು ಮೆಣಸನ್ನು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.

ಎರಡು ಲೋಟ ಬಾಸ್ಮತಿ ಅಕ್ಕಿಯಲ್ಲಿ ಉದುರುದುರಾಗಿ ಅನ್ನ ಮಾಡಿಕೊಳ್ಳಿ. ಸ್ಟವ್ ಹೊತ್ತಿಸಿ ಫ್ರೈಯಿಂಗ್ ಪ್ಯಾನ್ ಇಟ್ಟು ಎಣ್ಣೆ ಹಾಕಿ. ಕಾದಾಗ ಹೆಚ್ಚಿಟ್ಟ ಈರುಳ್ಳಿ ಹಾಕಿ ಹುರಿಯಿರಿ. ಮತ್ತೆರಡು ನಿಮಿಷಕ್ಕೆ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಹಾಕಿ ಹುರಿಯಿರಿ. ತರಕಾರಿಯನ್ನು ನೀರು ಹಾಕಿ ಬೇಯಿಸದೆ ಎಣ್ಣೆಯಲ್ಲೆ ಹುರಿಯಿರಿ. ತರಕಾರಿ ತುಂಬಾ ಮೆತ್ತಗಾಗಬಾರದು. ಈಗ ಈರುಳ್ಳಿ ಹೂಗಳಲ್ಲಿ ಅರ್ಧ ಭಾಗವನ್ನು ಹಾಕಿ ಹುರಿಯಿರಿ.

ನಂತರ ಸ್ಟವ್ ಉರಿಯನ್ನುಸಣ್ಣದಾಗಿ ಮಾಡಿ, ಪುಡಿ ಮಾಡಿಕೊಂಡ ಕಾಳು ಮೆಣಸು, ಉಪ್ಪು ಮತ್ತು ೨ ಚಮಚ ಸೋಯಾ ಸಾಸ್, ನಿಂಬೆ ರಸವನ್ನು ಹಾಕಿ, ಅನ್ನವನ್ನು ಹಾಕಿ ಕೈ ಮಗುಚಿ. ಸ್ಟವ್ ಆರಿಸಿ.

ಕೊನೆಯಲ್ಲಿ ಇನ್ನೊಂದು ಚಮಚ ಸೋಯಾ ಸಾಸ್ ಹಾಕಿ ಕೈ ಮಗುಚಿ. ಸರಳವಾದ ಆದರೆ ಅಷ್ಟೇ ರುಚಿಯಾದ ಫ್ರೈಡ್ ರೈಸ್ ತಯಾರು. ಪ್ಲೇಟ್ ಗೆ ಹಾಕಿ ಮೇಲೆ ಈರುಳ್ಳಿ ಹೂಗಳನ್ನು ಉದುರಿಸಿ ಸರ್ವ್ ಮಾಡಿ.