ವೆಂಟಿಲೇಟರ್ ಬೆಡ್‌ಗೆ ೧ ಲಕ್ಷ ಕೇಳಿದ ಮೂವರು ವೈದ್ಯರ ಸೆರೆ


ಪುಣೆ (ಮಹಾರಾಷ್ಟ್ರ),ಮೇ.೪-ಆಕ್ಸಿಜನ್, ಹಾಸಿಗೆಗಳು ಸಿಗದೇ ಪ್ರತಿನಿತ್ಯ ಕೊರೊನಾ ಸೋಂಕಿತ ರೋಗಿಗಳು ಪರದಾಡುತ್ತಿರುವಾಗ ನಗರದ ಆಸ್ಪತ್ರೆಯೊಂದು ವೆಂಟಿಲೇಟರ್ ಬೆಡ್‌ಗೆ ೧ ಲಕ್ಷ ರೂಗಳನ್ನು ಕೇಳಿರುವುದು ಬೆಳಕಿಗೆ ಬಂದಿದೆ.
ನಗರದ ಪಿಂಪ್ರಿ ಚಿಂಚ್ವಾಡ್ ಪ್ರದೇಶದ ಮಹಾನಗರ ಪಾಲಿಕೆ ಅಡಿಯಲ್ಲಿ ಬರುವ ಆಸ್ಪತ್ರೆಯ ವೈದ್ಯರು ರೋಗಿಯ ಕುಟುಂಬಕ್ಕೆ ೧ ಲಕ್ಷ ರೂ. ಬಿಲ್ ಮಾಡಿದ್ದಾರೆ.
ಉಚಿತ ಹಾಸಿಗೆ ಒದಗಿಸಬೇಕಾದ ಪಾಲಿಕೆ ಆಸ್ಪತ್ರೆ ಇಷ್ಟೊಂದು ದೊಡ್ಡ ಮೊತ್ತದ ಹಣ ಕೇಳಿರುವುದರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈ ಸಂಬಂಧ ಮೂವರು ವೈದ್ಯರನ್ನು ಬಂಧಿಸಿದ್ದಾರೆ.
ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯಿರುವ ಈ ವೇಳೆಯಲ್ಲಿ ರೆಮ್ಡೆಸಿವಿರ್, ಆಮ್ಲಜನಕ, ಮತ್ತು ಇತರ ವೈದ್ಯಕೀಯ ಸರಕುಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿರುವ ಬೆನ್ನಲ್ಲೇ ಇಂತಹ ಹೀನಕೃತ್ಯಕ್ಕೆ ಮುಂದಾದ ವೈದ್ಯರನ್ನು ಬಂಧಿಸಲಾಗಿದೆ.