ವೆಂಕಟಾಪುರ ಲಕ್ಷ್ಮೀವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ವೈಕುಂಠ ಏಕಾದಶಿ

ಕೋಲಾರ,ಜ,೩-ಸುಮಾರು ೬೦೦ ವರ್ಷಗಳಿಗೂ ಪುರಾತನವಾದ ತಾಲ್ಲೂಕಿನ ವೆಂಕಟಾಪುರ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆಗೆ ಸಹಸ್ರಾರು ಮಂದಿ ಸ್ವಾಮಿಯ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಪ್ರಸಾದ ಲಡ್ಡು ವಿತರಿಸಿದರು.
ಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಾಲಯದಿಂದಲೇ ಈ ಗ್ರಾಮಕ್ಕೆ ವೆಂಕಟಾಪುರ ಎಂದು ಹೆಸರು ಬಂದಿದೆ ಎನ್ನಲಾಗಿದ್ದು, ಶಿಥಿಲವಾಗಿದ್ದ ಪುರಾತನ ದೇವಾಲಯ ಕಳೆದ ೧೦ ವರ್ಷಗಳ ಹಿಂದೆ ಕೋಲಾರದ ದೊಡ್ಡಗೌಡರು ಸೇರಿದಂತೆ ಗ್ರಾಮಸ್ಥರು ಜೀರ್ಣೋದ್ಧಾರ ಮಾಡಿದ್ದು, ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ.
ದೇವಾಲಯವನ್ನು ಅತ್ಯಂತ ಸುಂದರವಾಗಿ ನವೀಕರಿಸಲಾಗಿದ್ದು, ಪೂಜಾ ಕಾರ್ಯಗಳನ್ನು ಅರ್ಚಕರಾದ ಮೋಹನ್ ಕುಮಾರ್, ಮುಳಬಾಗಿಲಿನ ಗೋಪಿನಾಥ್ ನಡೆಸಿದ್ದು, ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದರು.
ಪೂಜೆಯಲ್ಲಿ ಪಾಲ್ಗೊಂಡು ಸಹಸ್ರಾರು ಮಂದಿಗೆ ಪ್ರಸಾದವಿನಿಯೋಗದ ಕೊಡುಗೆ ನೀಡಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ವೈಕುಂಠ ಏಕಾದಶಿಯಂದು ಶ್ರೀನಿವಾಸನ ದರ್ಶನದಿಂದ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಇದೆ, ಜಿಲ್ಲೆಯ ಜನತೆಗೆ ಸಂಕಷ್ಟಗಳು ದೂರವಾಗಲಿ, ಒಳ್ಳೆಯ ಮಳೆ,ಬೆಳೆ ಆಗಲಿ, ಮುಖ್ಯವಾಗಿ ಅನ್ನದಾತರಾದ ರೈತರ ಬೆಳೆಗಳಿಗೆ ಉತ್ತಮ ಬೆಳೆ ಸಿಗಲಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದರು.


ದೇವರ ದರ್ಶನದಿಂದ ಮನಸ್ಸಿಗೂ ನೆಮ್ಮದಿ ಸಿಗುತ್ತದೆ, ಈ ಸ್ವಾಮಿಯ ಆಶೀರ್ವಾದಕ್ಕಾಗಿ ದೂರದೂರದಿಂದ ಜನ ಬರುತ್ತಾರೆ, ಅವರಂತೆ ನಾನೂ ಓರ್ವ ಭಕ್ತನಾಗಿ ಆಗಮಿಸಿದ್ದು,ಕೋಲಾರ ಜಿಲ್ಲೆಯ ಸಮಸ್ತರಿಗೂ ಒಳ್ಳೆಯದಾಗಲಿ, ಶ್ರೀನಿವಾಸನ ದರ್ಶನದಿಂದ ಸಮಾಜದಲ್ಲಿ ಶಾಂತಿ,ಸೌಹಾರ್ದತೆ ನೆಲಸಲಿ ಎಂದರು.
ವೆಂಕಟಾಪುರದ ಶ್ರೀನಿವಾಸನ ಮಹಿಮೆ ಅಪಾರವಾಗಿದ್ದು, ವಿಶ್ವದ ನಾನಾಕಡೆ ಕೋವಿಡ್ ಇದ್ದರೂ ಭಾರತದಲ್ಲಿ ಅದರ ತೀವ್ರತೆ ಇಲ್ಲವಾಗಿದೆ, ಮತ್ತೆ ಕೋವಿಡ್ ಮಹಾಮಾರಿ ಭಾರತದಲ್ಲಿ ಕಾಣಿಸಿಕೊಳ್ಳದಿರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ನುಡಿದರು.
ಪೂಜೆಯಲ್ಲಿ ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್, ಮುಖಂಡ ಸಿಎಂಆರ್ ಹರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್,ಎಸ್.ವಿ.ಸುಧಾಕರ್, ಮುಖಂಡರಾದ ವಕ್ಕಲೇರಿ ರಾಮು, ಪಾಲಾಕ್ಷಗೌಡ, ಗ್ರಾ.ಪಂ ಸದಸ್ಯ ಎ.ಎಸ್.ನಂಜುಂಡೇಗೌಡ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.
ಇಡೀ ಪೂಜಾ ಕಾರ್ಯ ಹಾಗೂ ಪ್ರಸಾದ ವಿನಿಯೋಗದಲ್ಲಿ ಗ್ರಾಮದ ಮುಖಂಡರಾದ ವೆಂಕಟರಮಣಪ್ಪ, ಅಪ್ಪಯ್ಯಣ್ಣ, ನಾಗೇಶ್, ಸುರೇಶ್, ಈರಪ್ಪ, ಕೆಂಪೇಗೌಡ, ಶ್ರೀನಿವಾಸ್, ಸೋಮಶೇಖರ್ ಮತ್ತಿತರರು ನೇತೃತ್ವ ವಹಿಸಿದ್ದರು.

.