ವೃದ್ಧ ಮಹಿಳೆಯರ ಯಾಮಾರಿಸಿ ಚಿನ್ನಾಭರಣ ಅಪಹರಣ

ಕುಣಿಗಲ್, ಮಾ. ೨೫- ವಯೋವೃದ್ದ ಮಹಿಳೆಯರಿಬ್ಬರನ್ನು ಅಪರಿಚಿತ ವ್ಯಕ್ತಿಗಳು ಸಿನಿಮೀಯ ರೀತಿಯಲ್ಲಿ ಮಂಕುಗೊಳಿಸಿ ನಾಲ್ಕು ಚಿನ್ನದ ಬಳೆ, ಒಂದು ಉಂಗುರ ಬಿಚ್ಚಿಸಿಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿಂದು ನಡೆದಿದೆ.
ಪಟ್ಟಣದ ಮಹಾವೀರನಗರದಲ್ಲಿರುವ ಶ್ರೀ ಪಾರ್ಶ್ವನಾಥ ಜೈನ ಮಂದಿರಕ್ಕೆ ಇಬ್ಬರು ವಯೋವೃದ್ದರಾದ ಮಾಲಾ ಮತ್ತು ಪದ್ಮಾಂಬ ಎಂಬುವರು ಎಂದಿನಂತೆ ಪೂಜೆಗೆ ಬಂದಿದ್ದಾರೆ. ಇವರನ್ನು ಅಪರಿಚಿತ ಇಬ್ಬರು ವ್ಯಕ್ತಿಗಳು ಹಿಂಬಾಲಿಸಿ ದೇವಾಲಯದಲ್ಲಿ ಯಾರೂ ಇಲ್ಲದಿರುವ ಸಮಯ ಅರಿತು ಒಳಹೋದ ಆಸಾಮಿಗಳು ನಾವು ಹೊಸದಾಗಿ ಜ್ಯೂಯಲರಿ ಅಂಗಡಿ ಪ್ರಾರಂಭ ಮಾಡುತ್ತಿದ್ದೇವೆ ಎಂದು ನೂರು ರೂ. ನೀಡಿ ಹುಂಡಿಗೆ ಹಾಕಿ ಎಂದು ತಿಳಿಸಿ ಮಹಿಳೆಯರ ಕೈಯಲ್ಲಿದ್ದ ಎರಡೆರಡು ಚಿನ್ನದ ಬಳೆ ಹಾಗೂ ಒಂದು ಉಂಗುರವನ್ನು ಮಂಕು ಮಾಡಿ ಬಿಚ್ಚಿಸಿಕೊಂಡು ದೇವರ ಮುಂದೆ ಇಡುತ್ತೇವೆ ಎಂದು ಒಂದು ಪೇಪರ್‌ನಲ್ಲಿ ಸುತ್ತಿ ಇಟ್ಟಿದ್ದಾರೆ. ನಂತರ ಆಶೀರ್ವದಿಸಿ ಎಂದೆಲ್ಲ ನಯವಾಗಿ ಪೂಜೆ ಪುನಸ್ಕಾರದ ಮಾತುಗಳನ್ನಾಡುತ್ತಲೇ ಬರುತ್ತೇವೆ ಎಂದು ಹೇಳಿದ ಅಪರಿಚಿತರು ಕಣ್ಮರೆಯಾಗಿದ್ದಾರೆ.
ನಂತರ ದೇವರ ಮುಂದೆ ಇರಿಸಿದ್ದ ಬಳೆಗಳು, ಉಗುರವನ್ನು ನೋಡಿದರೆ ಇರಲಿಲ್ಲ. ಅಲ್ಲಿ ಬರೀ ಇನ್ನೂರು ರೂ. ಪೇಪರ್ ನಲ್ಲಿ ಇತ್ತು. ಕೂಡಲೇ ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸಿಪಿಐ ಡಿ.ಎಲ್. ರಾಜು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲಿಸಿ ವಯೋವೃದ್ದರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.