ವೃದ್ಧ ದಂಪತಿ ಕೊಲೆಗೈದವರಿಗೆ ಸಿಕ್ಕಿದ್ದು 500 ರೂ.

ಅಹಮದಬಾದ್, ನ.10-ಹಣಕ್ಕಾಗಿ ಕಟ್ಟಡ ಕಾರ್ಮಿಕರು ಮನೆಯೊಂದಕ್ಕೆ ನುಗ್ಗಿ ಇಬ್ಬರು ವೃದ್ಧ ದಂಪತಿಯನ್ನು ಕೊಲೆ ಮಾಡಿರುವ ದಾರುಣ ಘಟನೆ ಘಾಟ್‌ಲೋದಿಯಾದಲ್ಲಿ ನಡೆದಿದೆ.
ಘಾಟ್‌ಲೋದಿಯಾದ ದಯಾನಂದ ಶಾನುಭೋಗ (90) ಮತ್ತು ವಿಜಯಲಕ್ಷ್ಮಿ ಶಾನುಭೋಗ (80) ಹತ್ಯೆಯಾದ ದಂಪತಿ. ಕೊಲೆ ಮಾಡಿದ ಏಮನ್‌ ಟೊಪ್ನೊ (26) ಮತ್ತು ಮುಕುತ್‌ ಹಪ್ಕಡದ (19) ನನ್ನು ಬಂಧಿಸಲಾಗಿದೆ.
ಕಟ್ಟಡ ಕಾರ್ಮಿಕರಾಗಿದ್ದ ಏಮನ್‌ ಮತ್ತು ಮುಕುತ್‌ ತಮ್ಮ ಮನೆಯವರಿಗೆ ಕೂಲಿ ಹಣವನ್ನು ಕಳುಹಿಸಿದ್ದರು. ತಮಗೆ ಹಣದ ಅವಶ್ಯಕತೆ ಹೆಚ್ಚಿತ್ತು. ಹೀಗಾಗಿ ಸಂಪಾದನೆಗೆ ಸುಲಭ ದಾರಿ ಹುಡುಕಲು ಪ್ರಯತ್ನಿಸಿದರು. ಆಗ ಮನೆ ದರೋಡೆಯ ಯೋಜನೆ ಅವರಿಗೆ ಹೊಳೆಯಿತು.
ಈ ವೇಳೆ ಮನೆಯೊಂದಕ್ಕೆ ನುಗ್ಗಿದ ಆರೋಪಿಗಳು ವೃದ್ಧ ದಯಾನಂದ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆತನ ಪತ್ನಿಯ ಕುತ್ತಿಗೆಯನ್ನೂ ಕೊಯ್ದಿದ್ದಾರೆ. ವೃದ್ಧ ದಂಪತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ, ಆರೋಪಿಗಳು ಮನೆಯನ್ನು ಹುಡುಕಾಡಿದ್ದಾರೆ. ಎಷ್ಟು ಹುಡುಕಿದರೂ ಕೊನೆಗೆ ಅವರಿಗೆ ಸಿಕ್ಕಿದ್ದು ಕೇವಲ 500 ರೂಪಾಯಿ. ಕೊನೆಗೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಗಂಭೀರ ಗಾಯಗೊಂಡಿದ್ದ ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.