
(ಸಂಜೆವಾಣಿ ವಾರ್ತೆ)
ವಿಜಯಪುರ: ಆ.4: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಮುಂದೆ ಅಳಲು ತೋಡಿಕೊಂಡು ಬಂದ ಬಡ ವೃದ್ಧ ದಂಪತಿಗಳಿಗೆ ಒಂದು ಗಂಟೆಯೊಳಗೆ ವೃದ್ಧಾಪ್ಯ ವೇತನ ಮಂಜೂರು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಡ ವೃದ್ಧ ದಂಪತಿಗಳು ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ತಮ್ಮ ಜೀವನೋಪಾಯಕ್ಕೆ ಆಸರೆ ಒದಗಿಸಲು ಮನವಿ ಮಾಡಿಕೊಂಡಾಗ, ಖುದ್ದು ಜಿಲ್ಲಾಧಿಕಾರಿಗಳು ಅವರ ದೂರನ್ನು ಶಾಂತಚಿತ್ತದಿಂದ ಅಲಿಸಿ, ಸ್ಥಳದಲ್ಲಿಯೇ ವೃದ್ದ ದಂಪತಿಗಳಿಗೆ ಪಿಂಚಣಿ ಮಂಜೂರು ಮಾಡಿಸುವ ಮೂಲಕ ಅಸರೆ ಒದಗಿಸಿರುವ ಘಟನೆ ಜರುಗಿದೆ.
ಸರ್ಕಾರದ ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಜಿಲ್ಲೆಯ ಯಾವುದೇ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡುವಂತಾಗಬಾರದು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಿ ಅರ್ಹ ಫಲಾನುಭವಿಗಳಿಗೆ ಅವಶ್ಯಕತೆಯಿರುವವರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಲು ಕ್ರಮ ವಹಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವಿವಿಧ ಪಿಂಚಣಿ ಯೋಜನೆಗಳಾಗಿ ಅರ್ಹರು ತಾಲೂಕಾ ತಹಶೀಲ್ದಾರರನ್ನು ಸಂಪರ್ಕಿಸಬೇಕು. ಜಿಲ್ಲೆಯಾದ್ಯಂತ ಪ್ರತಿ ಶನಿವಾರ ಪಿಂಚಣಿ ಅದಾಲತ್‍ಗಳನ್ನು ಆಯೋಜಿಸುವ ಮೂಲಕ ಅರ್ಹರಿಗೆ ಸೌಲಭ್ಯ ದೊರಕಿಸಲು ಪ್ರಯತ್ನಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.