ವೃದ್ಧೆಯ ಹತ್ಯೆಗೈದು ಚಿನ್ನಾಭರಣ ಲೂಟಿ: ಆರೋಪಿಯ ಬಂಧನ

ಬೆಳ್ತಂಗಡಿ, ಜು.೨೫- ಬೆಳಾಲಿನಲ್ಲಿ ಮನೆಗೆ ನುಗ್ಗಿ ವೃದ್ಧೆಯೋರ್ವರನ್ನು ಕೊಲೆಗೈದು ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾನರ್ಪ ನಿವಾಸಿ, ಮೃತ ವೃದ್ಧೆಯ ಸಂಬಂಧಿಕನಾಗಿರುವ ಅಶೋಕ್ (28) ಎಂದು ಗುರುತಿಸಲಾಗಿದೆ. ಈತ ವೃದ್ಧೆಯನ್ನು ಹತ್ಯೆಗೈದು ಚಿನ್ನಾಭರಣ ಹಾಗೂ ನಗದು ಅಪಹರಿಸಿ ಪರಾರಿಯಾಗಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಕೆಲವು ದಿನಗಳಿಂದ ಇಲ್ಲಿ ಬಂದು ಹೋಗುತ್ತಿದ್ದ ಎನ್ನಲಾಗಿದ್ದು, ಹಣಕ್ಕಾಗಿ ವೃದ್ಧೆಯನ್ನು ಹತ್ಯೆ ಮಾಡಿದ್ದಾನೆ ಎಂದು ದೂರಲಾಗಿದೆ. ಕೊಲೆ ನಡೆದ ಮನೆಯ ಸಮೀಪ ಈತ ಹೋಗುತ್ತಿರುವುದನ್ನು ಸ್ಥಳೀಯ ವ್ಯಕ್ತಿಯೋರ್ವರು ಕಂಡಿದ್ದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸುಳಿವಿನ ಆಧಾರದಲ್ಲಿ ಹುಡುಕಾಟ ನಡೆಸಿದಾಗ ಆರೋಪಿಯ ಬಗ್ಗೆ ಮಾಹಿತಿ ಲಭಿಸಿದ್ದು ನಂತರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಆರೋಪಿ ಐಸ್ ಕ್ರೀಮ್ ವಾಹನದಲ್ಲಿ ಕೆಲಸ ಮಾಡಿಕೊಂಡಿದ್ದು, ಸಂಬಂಧಿಯಾಗಿದ್ದ ಕಾರಣ ಅಕ್ಕು ಮನೆಗೆ ಬಂದು ಹೋಗುತ್ತಿದ್ದ. ಈ ವೇಳೆ ಹಣ ಕೂಡ ಕೇಳಿ ಪಡೆದು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.