ವೃದ್ಧೆಯ ಮೇಲೆ ಅತ್ಯಾಚಾರ ದುಷ್ಕರ್ಮಿ ಸೆರೆ

ಬೆಂಗಳೂರು,ಜ.೫-ಮನೆಯಲ್ಲಿ ಒಂಟಿಯಾಗಿದ್ದ ೭೧ ವರ್ಷದ ವೃದ್ಧೆಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಅತ್ಯಾಚಾರ ಮಾಡಿರುವ ಮೃಗೀಯ ಘಟನೆ ಕೋರಮಂಗಲದಲ್ಲಿ ನಡೆದಿದೆ.
ಹೀನಕೃತ್ಯವೆಸಗಿದ ಆರೋಪಿ ಜೂಲಿಯಾ ರೋಸಾ (೩೧)ನನ್ನು ಬಂಧಿಸಲಾಗಿದೆ. ಆರೋಪಿಯು ತೃತೀಯ ಲಿಂಗಿಯಾಗಿದ್ದು ಸಂತ್ರಸ್ತೆ ವೃದ್ದೆಯ ಮನೆಯ ಸಮೀಪವೇ ತನ್ನ ಇಬ್ಬರು ಗೆಳೆಯರೊಂದಿಗೆ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.
ಸಂತ್ರಸ್ತೆಯು ಕಳೆದ ಜ.೨ ರಂದು ಸಂಜೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಕೋರಮಂಗಲ ಪೊಲೀಸ್ ಠಾಣೆಗೆ ಆಗಮಿಸಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ.
ವೃದ್ಧೆಯು ಮಧ್ಯಾಹ್ನ ೨.೩೦ರ ಸುಮಾರಿಗೆ ಮನೆಗೆಲಸ ಮುಗಿಸಿ ಮನೆಯ ಮೊದಲ ಮಹಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ದುಷ್ಕರ್ಮಿ ಮನೆಗೆ ಪ್ರವೇಶಿಸಿದ್ದಾನೆ.
ಮಧ್ಯಾಹ್ನ ೩ ಗಂಟೆಗೆ ಮನೆಯ ಬೆಲ್ ಹೊಡೆಯುವ ಶಬ್ದ ಕೇಳಿಸಿತು. ನಾನು ಬಂದು ನೋಡಿದಾಗ ನೆರೆಮನೆಯ ರೋಸಾ ಅವರು ಮೊದಲ ಮಹಡಿಗೆ ಬಂದಿದ್ದರು. ಹೇಗೆ ಒಳಗೆ ಬಂದೆ ಎಂದು ಕೇಳಿದಾಗ, ಮನೆಯ ಗ್ಲಾಸ್ ಡೋರ್ ಮುರಿದಿತ್ತು. ಅದರ ಮೂಲಕ ಒಳಗೆ ಬಂದೆ ಎಂದು ಹೇಳಿದ್ದಾನೆ. ನಾನು ಹೋಗಿ ನೋಡಿದಾಗ ಗಾಜಿನ ಬಾಗಿಲು ಮುರಿದಿತ್ತು ಎಂದು ವೃದ್ಧೆ ದೂರಿನಲ್ಲಿ ತಿಳಿಸಿದ್ದಾರೆ.
ಅಷ್ಟರಲ್ಲಿ ರೋಸಾ ತಮ್ಮನ್ನು ಬೆಡ್ ರೂಮ್ ಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಅಸ್ವಸ್ಥಳಾಗಿ ನನಗೆ ಪ್ರಜ್ಞೆ ತಪ್ಪಿತು. ಸಂಜೆ ೬ ಗಂಟೆ ಸುಮಾರಿಗೆ ನನಗೆ ಎಚ್ಚರವಾಯಿತು.
ತಕ್ಷಣ ನಾನು ದೂರವಾಣಿ ಮೂಲಕ ಸಂಬಂಧಿಕರಿಗೆ ವಿಷಯ ತಿಳಿಸಿದೆ. ಅವರು ೭.೩೦ರ ಸುಮಾರಿಗೆ ಮನೆಗೆ ಬಂದು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ದಾಖಲಿಸಿದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಕೋರಮಂಗಲ ಪೊಲೀಸರು ರೋಸಾ ವಿರುದ್ಧ ಅತ್ಯಾಚಾರ ಮತ್ತು ಮನೆಗೆ ಅತಿಕ್ರಮ ಪ್ರವೇಶಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ರೋಸಾನನ್ನು ವಶಕ್ಕೆ ಪಡೆಯಲಾಗಿದೆ. ರೋಸಾನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಪುರುಷ ಎಂಬುದು ದೃಢಪಟ್ಟಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.