ವೃದ್ಧಾಪ್ಯ ವೇತನ ಮಾಡಿಸುವುದಾಗಿ ಹೇಳಿ ಅಜ್ಜಿಗೆ ವಂಚನೆ

ಚಿತ್ರದುರ್ಗ.ಮಾ.೨೯;: ಕುರಿಕಾಯುವ ಕುಟುಂಬವೊಂದು ಅಜ್ಜಿಯೊಬ್ಬರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ವೃದ್ಧಾಪ್ಯ ವೇತನ ಮಾಡಿಸಿಕೊಡುವುದಾಗಿ ನಂಬಿಸಿ ನಾಲ್ಕು ಎಕರೆ ಜಮೀನನ್ನು ಅಕ್ರಮವಾಗಿ ಲಪಟಾಯಿಸಿ ವಂಚಿಸಿದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕು ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕಳವಿಭಾಗಿಯಲ್ಲಿ ಜರುಗಿದೆ. ಅಪ್ಪ, ಗಂಡ ಮತ್ತು ಮಾವನ ಜೊತೆ ಸೇರಿದ ಕುರಿಗಾಹಿ ತಂಡ ಸುಲಭವಾಗಿ ಅಜ್ಜಿಯ ನಾಲ್ಕು ಎಕರೆ ಭೂಮಿಯನ್ನು ಕಬಳಿಸಿ ಈಗ ಅಜ್ಜಿ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅಜ್ಜಿ ನ್ಯಾಯದ ಮೊರೆ ಹೋದ ಬೆನ್ನಲ್ಲೆ ಇಡೀ ಊರಿಗೆ ಕುರಿಗಾಹಿ ಕುಟುಂಬದ ಖತರ್ನಾಕ್ ವಂಚನೆಯ ಕತೆ ಹೊರಬಿದ್ದಿದೆ. ಅಜ್ಜಿಯ ಆಸ್ತಿ ಕಬಳಿಸಲು ತಂಡ ರಚಿಸಿಕೊಂಡು ದಿನವೂ ಸಂಚು ರೂಪಿಸಿ, ಹೊಂಚು ಹಾಕಿ ಕೊನೆಗೆ ಯಾರಿಗೂ ತಿಳಿಯದ ಹಾಗೆ ಜಮೀನನ್ನು ಕಬಳಿಸಿದ್ದು ಈ ಜಮೀನಿನಲ್ಲಿರುವ ದೇವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಓದಲು ಬರೆಯಲು ಅಷ್ಟೆ ಅಲ್ಲ ಕನಿಷ್ಟ ದುಡ್ಡು ಎಣಿಸಲು ಕೂಡ ಬಾರದ 85 ವರ್ಷದ ವಯೋವೃದ್ಧೆ ಕಳವಿಭಾಗಿ ನಿಂಗಮ್ಮ ವಂಚನೆಗೊಳಗಾದ ಅಮಾಯಕ ವೃದ್ಧೆ. ಇದೇ ಹಿರಿಯೂರು ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗೇನಹಳ್ಳಿ ಗ್ರಾಮದ ಕುರಿ ಜಗನ್ನಾಥ್ ಆಲಿಯಾಸ್ ಕುರಿ ಜಗಣ್ಣ ಎಂದೆ ಕರಿಸಿಕೊಂಡಿರುವ ಆಸಾಮಿ ತನ್ನ ಆಪ್ತ ಹರ್ತಿಕೋಟೆ ಸಮೀಪದ ನಾಗಜ್ಜನಕಟ್ಟೆ ಗ್ರಾಮದ ಕೆಂಚಪ್ಪ ಜತೆ ಸೇರಿ ಮತ್ತು ಕುರಿಜಗನ ಹೆಣ್ಣು ಕೊಟ್ಟ ಮಾವ ಗುಳಗೊಂಡನಹಳ್ಳಿ ಪೂಜಾರಿ ಗಿಡ್ಡಪ್ಪ ಜತೆ ಸೇರಿ ಅಜ್ಜಿ ಜಮೀನನ್ನು ಅಕ್ರಮ ದಾಖಲೆಗಳ ಮೂಲಕ ಯಾಮಾರಿಸಿದ್ದು ಇದೀಗ ಅಜ್ಜಿಗೆ ಇವರ ವಂಚನೆಯ ವಿಷಯ ತಿಳಿದು ಇವರ ವಿರುದ್ಧ್ದ ಪೊಲೀಸರಿಗೆ ಮತ್ತು ನ್ಯಾಯಾಧೀಕರಣಕ್ಕೆ ದೂರು ನೀಡಿದ್ದಾರೆ. ಆಗಿದ್ದೇನು: ಕಳವಿಭಾಗಿ ಗ್ರಾಮದ 80 ವರ್ಷದ ನಿಂಗಮ್ಮ ಕೋಂ ಲೇಟ್ ಮಲ್ಲಪ್ಪ ಇದೀಗ ಎಲ್ಲವನ್ನು ಕಳೆದುಕೊಂಡು ಸಂತ್ರಸ್ಥೆಯಾಗಿರುವ ವೃದ್ಧೆ. ತನ್ನ ಜಮೀನಿನಲ್ಲಿ ಕೋರು ಮೂಲಕ ಮಾಡುತ್ತಿದ್ದ ಗುಳಗೊಂಡನಹಳ್ಳಿ ಪೂಜಾರಿ ಗಿಡ್ಡಪ್ಪ ಅವರು ಆಪ್ತರಾಗಿದ್ದ. ಇಂತಹ ವೇಳೆ ಇದೇ ಗಿಡ್ಡಪ್ಪ ತನ್ನ ಮಗಳು ವೀರಮ್ಮ ಮತ್ತು ವೀರಮ್ಮನ ಗಂಡ ಕುರಿ ಜಗನ್ನಾಥ್ ಅವರನ್ನು ಕರೆಸಿ ಜಮೀನಿನಲ್ಲಿ ಕುರಿಮಂದೆ ಬಿಟ್ಟರೇ ಬೆಳೆ ಚೆನ್ನಾಗಿ ಬರುತ್ತದೆ ಎಂದು ಹೇಳಿದ್ದ.  ಪೂಜಾರಿಯ ಮಾತನ್ನ ನಂಬಿದ್ದ ಅಜ್ಜಿ ನಿಂಗಮ್ಮ ಅವರು ಕುರಿ ಕಾಯುವ ಫ್ಯಾಮಿಲಿಯನ್ನು ಕರೆತಂದು ಹರ್ತಿಕೋಟೆ ಗ್ರಾಮದ ರಿ.ಸರ್ವೇನಂ 322/4, 3 ಎಕರೆ, 36 ಗುಂಟೆ  ಜಮೀನಿನಲ್ಲಿ ಬೀಡುಬಿಟ್ಟ. ದಿನ ಕಳೆದಂತೆ ಕುರಿಗಾಹಿ ಕುಟುಂಬ ಅಜ್ಜಿಗೆ ಆಪ್ತವಾಯಿತು. ಹೀಗಿರುವಾಗ ಅಜ್ಜಿಯ ಸಂಬಂಧಿಗಳು ಬೆಂಗಳೂರು ಮತ್ತು ವಿವಿಧ ಭಾಗಗಳಲ್ಲಿ ಕೆಲಸಕ್ಕೆ ಹೋಗಿದ್ದ ಸಮಯ ಅರಿತ ಆರೋಪಿಗಳಾದ 70 ವರ್ಷದ ಗಿಡ್ಡಪ್ಪ, 55 ವರ್ಷದ ಕೆಂಚಪ್ಪ, 50ವರ್ಷದ ಅಳಿಯ ಕುರಿಜಗ ಮತ್ತು ಕುರಿಜಗನ ಹೆಂಡತಿಯಾದ ಗಿಡ್ಡಪ್ಪನ ಮಗಳು ವೀರಮ್ಮ ಸಂಚು ರೂಪಿಸಿದ್ದಾರೆ.ಅಲ್ಲದೇ ತಮ್ಮ ಹೆಸರಿಗೆ ಎಲ್ಲವನ್ನೂ ದಾನರೂಪದಲ್ಲಿ ವರ್ಗಾಯಿಸಿಕೊಂಡಿದ್ದಾರೆ.ಓನಕೆ ಓಬವ್ವ ನಾಡಿನಲ್ಲಿ ಅಜ್ಜಿಗೆ ಮೋಸ
ಚಿತ್ರದುರ್ಗದಲ್ಲಿ ಪ್ರಸ್ತುತ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಲ್ಲಾ ರಕ್ಷಣಾಧಿಕಾರಿ ಜಿ. ರಾಧಿಕಾ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನಂದಿನಿ ದೇವಿ, ಮತ್ತು ಜಿಪಂ ಅಧ್ಯಕ್ಷೆ, ಜಿಪಂ ಉಪಾಧ್ಯಕ್ಷೆ, ತಾಲೂಕು ಪಂಚಾಯಿತಿ ಅಧ್ಯಕ್ಷೆ, ತಾಪಂ ಉಪಾಧ್ಯಕ್ಷೆ, ಹರ್ತಿಕೋಟೆಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೀಗೆ ಸಾಲು ಸಾಲು ಮಹಿಳೆಯರೇ ಅಧಿಕಾರದಲ್ಲಿದ್ದರೂ 85 ವರ್ಷದ ನಿಂಗಜ್ಜಿ ಇಂತ ಅನ್ಯಾಯವಾಗಿದೆ. ಇದನ್ನು ಬಿಡಲು ಸಾಧ್ಯವೇ ಎಂದು ಇಡೀ ಕಳವಿಭಾಗಿ ಊರ ಜನ ಸಿಡಿದೆದ್ದಿದ್ದಾರೆ.