ವೃದ್ಧರ ಆರೋಗ್ಯ ತಪಾಸಣೆ

ಲಕ್ಷ್ಮೇಶ್ವರ, ನ19- ತಾಲ್ಲೂಕು ಕಾನೂನು ಸೇವಾ ಸಮಿತಿ ಲಕ್ಷ್ಮೇಶ್ವರ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಇಲ್ಲಿನ ಶಾಂತಿಧಾಮ ವೃದ್ಧಾಶ್ರಮದಲ್ಲಿ ವೃದ್ಧರ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ನ್ಯಾಯಾಧೀಶರಾದ ಎಂ.ಆರ್. ಒಡೆಯರ ಶಿಬಿರ ಉದ್ಧಾಟಿಸಿ ‘ಹಿರಿಯರು ನಮ್ಮ ಸಮಾಜದ ಆಸ್ತಿ. ಅವರನ್ನು ಗೌರವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅವರ ಇಳಿವಯಸ್ಸಿನಲ್ಲಿ ಜೋಪಾನ ಮಾಡಬೇಕು. ವೃದ್ಧರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳು ಇದ್ದು ವೃದ್ಧಾಶ್ರಮ ನಡೆಸುವವರು ವೃದ್ಧರಿಗೆ ವೈಯಕ್ತಿಕ ಸ್ವಚ್ಛತೆ ಕುರಿತು ತಿಳಿ ಹೇಳಬೇಕು’ ಎಂದರು.
ಈ ಸಂದರ್ಭದಲ್ಲಿ ಕಿರಿಯ ನ್ಯಾಯಾಧೀಶ ಎನ್.ಪ್ರತಾಪಕುಮಾರ, ಸಿಪಿಆಯ್ ವಿಕಾಸ ಲಮಾಣಿ, ಪಿಎಸ್‍ಆಯ್ ಶಿವಯೋಗಿ ಲೋಹಾರ, ವೈದ್ಯಾಧಿಕಾರಿ ಡಾ.ಗಿರೀಶ ಮರಡ್ಡಿ, ವಕೀಲರ ಸಂಘದ ಉಪಾಧ್ಯಕ್ಷ ಎನ್.ಆಯ್. ಬೆಲ್ಲದ ಇದ್ದರು.