ಬೆಂಗಳೂರು, ಏ. ೨೯- ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ವೃದ್ಧರು, ಅಂಗವಿಕಲರು, ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಮತದಾನ ಪ್ರಕ್ರಿಯೆಗೆ ಚಾಲನೆ ದೊರತಿದೆ.
ಇಂದಿನಿಂದ ಮತದಾನ ಚಲಾಯಿಸಲು ಅವಕಾಶ ಕಲ್ಪಿಸಿದ್ದು ಈ ಪ್ರಕ್ರಿಯೆ ಏಪ್ರಿಲ್ ೬ರವರೆಗೆ ನಡೆಯಲಿದೆ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ೮೦ ವರ್ಷಕ್ಕೂ ಮೇಲ್ಪಟ್ಟ ಹಿರಿಯ ಮತದಾರರು ೧೨.೧೫ ಲಕ್ಷ ಮತದಾರರಿದ್ದಾರೆ. ಈ ಪೈಕಿ ೫.೪೬ಲಕ್ಷ ಪುರುಷರು ಹಾಗೂ ೬.೬೯ ಲಕ್ಷ ಮಹಿಳೆಯರು ಮತ್ತು ಇತರೆ ೧೬ ಮಂದಿ ಮತದಾರರು ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅಂಗವಿಕಲರು, ವೃದ್ಧರು ಚಲಾಯಿಸುವ ಮತದಾನವನ್ನು ಗೌಪ್ಯವಾಗಿಡಲಾಗಿದೆ. ಬಿಸಿಲ ಝಳ ಹಿನ್ನೆಲೆಯಲ್ಲಿ ವೃದ್ಧರು ಮತದಾನ ಮಾಡಲು ಸಾಧ್ಯವಾಗದ ಕಾರಣ ಮತಗಟ್ಟೆ ಸಿಬ್ಬಂದಿಗಳು ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವ ಮನೆಗಳಿಗೆ ತೆರಳಿ ವೃದ್ಧರು ತಮ್ಮ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಟ್ಟರು. ಇದನ್ನು ಸದುಪಯೋಗಪಡಿಸಿಕೊಂಡು ವೃದ್ಧರು ತಮ್ಮ ಹಕ್ಕನ್ನು ಚಲಾಯಿಸಿದ್ದನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದು ಕಂಡು ಬಂತು.
ಇದೇ ವೇಳೆ ಅಗತ್ಯ ಸೇವೆಗಳ ಇಲಾಖೆಯೆಂದು ಗುರುತಿಸಲಾದ ಇಲಾಖಾಧಿಕಾರಿಗಳು ಮೇ ೨ರಿಂದ ೪ರವರಗೆ ಮತದಾನ ಮಾಡಲಿದ್ದಾರೆ. ಮನೆಯಿಂದ ಮತದಾನ ಪಡೆದುಕೊಳ್ಳಲು ನಿಯೋಜಿಸಲಾಗಿರುವ ಚುನಾವಣಾ ಸಿಬ್ಬಂದಿ ನೋಂದಾಯಿಸಿಕೊಂಡಿರುವ ವ್ಯಕ್ತಿಗಳಿಗೆ ಯಾವ ಸಮಯಕ್ಕೆ ಬರುತ್ತೇವೆ ಎಂಬ ಬಗ್ಗೆ ಮಾಹಿತಿ ನೀಡಿ ಗೌಪ್ಯವಾಗಿ ಮತದಾನ ಮಾಡಿಕೊಳ್ಳಲಾಗುತ್ತಿದೆ. ಇಬ್ಬರು ಚುನಾವಣಾಧಿಕಾರಿ, ಒಬ್ಬ ವಿಡೀಯೋ ಗ್ರಾಫರ್, ಒಬ್ಬ ಪೊಲೀಸ್ ಸಿಬ್ಬಂದಿ ಮತ್ತು ರಾಜಕೀಯ ಪಕ್ಷಗಳ ಏಜೆಂಟ್‌ಗಳು ಉಪಸ್ಥಿತರಿಲಿದ್ದಾರೆ.
ವೃದ್ಧರು, ಅಂಗವಿಕಲರು, ತಮ್ಮ ಹಕ್ಕನ್ನು ಚಲಾಯಿಸಿದ ಬಳಿಕ ಮತಪೆಟ್ಟಿಗೆಯನ್ನು ಸ್ಟ್ರಾಂಗ್ ರೂಮಿನಲ್ಲಿರಿಸಿ ಮೇ ೧೩ರಂದು ಮತ ಎಣಿಕೆಗೆ ಕೊಂಡೊಯ್ಯಲಾಗುತ್ತದೆ.