ವೃದ್ಧನ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ದೋಚಿದ್ದ ಆರೋಪಿ ಬಂಧನ

ಕಲಬುರಗಿ,ಜೂ.29-ಇತ್ತೀಚೆಗೆ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ ಹಣ, ಮೊಬೈಲ್ ದೋಚಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅಶೋಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭೀಮನಗರ ನಿವಾಸಿ ಶಿವಾ ಹುಣ್ಣೆ (22) ಎಂಬಾತನನ್ನು ಬಂಧಿಸಿ 5 ಸಾವಿರ ರೂಪಾಯಿ ಮೌಲ್ಯದ 1 ರಿಯಲ್ ಮೀ ಮೊಬೈಲ್, 5 ಸಾವಿರ ರೂ.ಮೌಲ್ಯದ ಒಪ್ಪೋ ಮೊಬೈಲ್ ಮತ್ತು 650 ರೂ.ನಗದು ಸೇರಿ 10,650 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಕಾಟಂದೇವರಹಳ್ಳಿಯ ಸಿದ್ರಾಮಪ್ಪ ಎಂಬುವವರು ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಮತ್ತು ಮೊಬೈಲ್ ಕವರ್‍ನಲ್ಲಿಟ್ಟಿದ್ದ ಹಣ ದೋಚಿಕೊಂಡು ಹೋಗಿದ್ದ ಈ ಸಂಬಂಧ ಅವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ಸಂಬಂಧ ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಐ.ಎ.ಚಂದ್ರಪ್ಪ, ದಕ್ಷಿಣ ಉಪ ವಿಭಾಗದ ಎಸಿಪಿ ಭೂತೇಗೌಡ ಅವರ ಮಾರ್ಗದರ್ಶನದಲ್ಲಿ ಅಶೋನಗರ ಪೊಲೀಸ್ ಠಾಣೆ ಪಿಐ ಪಂಡಿತ ಸಗರ ಅವರ ನೇತೃತ್ವದಲ್ಲಿ ಪಿಎಸ್‍ಐ ಶಿವಪ್ಪ, ಸಿಬ್ಬಂದಿಗಳಾದ ಗುರುಮೂರ್ತಿ, ಸಂಜುಕುಮಾರ, ಶಿವಲಿಂಗ ಮತ್ತು ನೀಲಕಂಠರಾವ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.