ವೃದ್ಧನ ಕತ್ತು ಸೀಳಿ ಭೀಕರ ಕೊಲೆ


ಬೆಂಗಳೂರು,ಏ.೨೩-ಜಮೀನು ವಿಚಾರದ ಜಗಳದಲ್ಲಿ ವೃದ್ಧನ ಕುತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಕಡಬಗೆರೆಯ ರಾಜರಾಜೇಶ್ವರಿ ಲೇಔಟ್‌ನಲ್ಲಿ ನಡೆದಿದೆ.
ರಾಜರಾಜೇಶ್ವರಿ ಲೇಔಟ್‌ನ ಸಿದ್ದಗಂಗಪ್ಪ (೬೭) ಮೃತಪಟ್ಟವರು.ಮನೆಯ ಹತ್ತಿರದಲ್ಲಿ ವಾಯುವಿಹಾರಕ್ಕೆ ಹೋಗಿದ್ದ ಸಿದ್ದಗಂಗಪ್ಪ ಅವರನ್ನು ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿ ಕುತ್ತಿಗೆ ಸೀಳಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಿದ್ದಗಂಗಪ್ಪನನ್ನು ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಸಹ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸಿದ್ದಗಂಗಪ್ಪರ ಜಮೀನಿಗೆ ಹೊಂದಿಕೊಂಡಂತೆ ಇರುವ ಬಡಾವಣೆಯನ್ನು ಪಾಪಣ್ಣ ಹಾಗೂ ಉಮೇಶ್ ಎಂಬುವರು ಅಭಿವೃದ್ಧಿಪಡಿಸಿ ನಿವೇಶನ ಮಾಡಿ ಮಾರಲು ಅಗ್ರಿಮೆಂಟ್ ಹಾಕಿಸಿಕೊಂಡಿದ್ದು ಆದರೆ ಮೂರ್ನಾಲ್ಕು ವರ್ಷ ಕಳೆದರೂ ಬಡಾವಣೆ ಅಭಿವೃದ್ಧಿಪಡಿಸದೆ ಸಿದ್ದಗಂಗಪ್ಪನ ಜಮೀನಿನ ೧೫ ಗುಂಟೆ ಜಾಗವನ್ನು ಹಣ ನೀಡದೆ ಮತ್ತೊಬ್ಬರಿಗೆ ನೋಂದಣಿ ಮಾಡಿದ್ದರು .
ಪಾಪಣ್ಣ ಮತ್ತು ಉಮೇಶ್ ತನ್ನ ಜಮೀನು ಒತ್ತುವರಿ ಮಾಡಿದ್ದಾರೆಂದು ಸಿದ್ದಗಂಗಪ್ಪ ನೆಲಮಂಗಲದ ಜೆಎಂಎಫ್‌ಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಆದರೆ ಸೂಕ್ತ ದಾಖಲೆ ಒದಗಿಸದ ಕಾರಣ ಕೇಸ್ ಖುಲಾಸೆಗೊಂಡಿದೆ. ಈ ಸಂಬಂಧ ಸಿದ್ದಗಂಗಪ್ಪ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಫೈಲ್ ಮಾಡಿದ್ದರು.
ಈ ವಿಚಾರಕ್ಕೆ ಪಾಪಣ್ಣ, ಉಮೇಶ್ ಹಾಗೂ ಕೊಲೆಯಾದ ಸಿದ್ದಗಂಗಪ್ಪ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಹೀಗಾಗಿ ಇವರಿಬ್ಬರೇ ಕೊಲೆ ಮಾಡಿದ್ದಾರೆಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊಲೆಗೈದು ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.