ವೃತ್ತಿ ಸಾಮರ್ಥ್ಯ ಅಭಿವೃದ್ದಿಗೆ ತರಬೇತಿ ಅಗತ್ಯ

ಚಿತ್ರದುರ್ಗ.ಜ.೫: ವೃತ್ತಿ ಸಾಮರ್ಥ್ಯ ಅಭಿವೃದ್ದಿಗೆ ತರಬೇತಿ ಅಗತ್ಯ ಎಂದು ಚಿತ್ರದುರ್ಗ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಶೋಭಾ ಹೇಳಿದರು ನಗರದ ಡಯಟ್‌ನಲ್ಲಿ  ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಪದವಿಪೂರ್ವ ಶಿಕ್ಷಣ ಇಲಾಖೆ ಚಿತ್ರದುರ್ಗ ಹಾಗೂ ಡಯಟ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ನೂತನವಾಗಿ ನೇಮಕಗೊಂಡಿರುವ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಆಯೋಜಿಸಿದ್ದ ವೃತ್ತಿ ಬುನಾದಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.  ಧನಾತ್ಮಕ ಚಿಂತನೆಯೊಂದಿಗೆ ಉಪನ್ಯಾಸಕರು ವೃತ್ತಿಯಲ್ಲಿ ಸರಳತೆ, ಸಹನೆ ರೂಢಿಸಿಕೊಂಡು ತೃಪ್ತಿ ಭಾವನೆ ಹೊಂದಬೇಕು ಎಂದರು. ಡಯಟ್ ಪ್ರಾಚಾರ್ಯ ಎಸ್.ಕೆ.ಬಿ. ಪ್ರಸಾದ್ ಮಾತನಾಡಿ ನಿರಂತರ ಶ್ರಮ, ಅಧ್ಯಯನದಿಂದ  ಯಶಸ್ಸು ಸಾದ್ಯವಾಗುತ್ತದೆ. ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು. ಶಿಕ್ಷಕರು ನಿರಂತರವಾಗಿ  ವಿದ್ಯಾರ್ಥಿಯಂತೆ ಅಧ್ಯಯನ ಮಾಡಬೇಕು. ಶಿಕ್ಷಕನು ಒಬ್ಬ ನಟನಾಗಿ ಸೈದ್ದಾಂತಿಕ ಅಭಿನಯದ ಮೂಲಕ ತರಗತಿಯಲ್ಲಿ ತೃಪ್ತಿ ಭಾವನೆಯಿಂದ ಬೋಧಿಸಬೇಕು ಎಂದರು.  ನೋಡಲ್ ಅಧಿಕಾರಿ ಬೋರೇಗೌಡ  ಮಾತನಾಡಿ, ಶಿಬಿರಾರ್ಥಿಗಳು ತರಬೇತಿಯಲ್ಲಿ ಸಮಯಪಾಲನೆಯೊಂದಿಗೆ ಸಕ್ರಿಯವಾಗಿ ಭಾಗವಹಿಸಬೇಕು ಉಪನ್ಯಾಸ , ಚಟುವಟಿಕೆ, ಗುಂಪು ಚರ್ಚೆಯಲ್ಲಿ ತೊಡಗಿಸಿಕೊಂಡು ಪರಸ್ಪರ ವಿಷಯ ವಿನಿಮಯ ಮಾಡಿಕೊಳ್ಳಬೇಕೆಂದರು .         ಐಮಂಗಲ ಸರ್ಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸಜ್ಜನ್ ಮಾತನಾಡಿ, ವೃತ್ತಿ ಜೀವನದ ಸೌಧ ಕಟ್ಟಿಕೊಳ್ಳಲು ಬುನಾದಿ ತರಬೇತಿ ಅಗತ್ಯವಾಗಿದೆ. ವಿದ್ಯಾರ್ಥಿಗಳು ನಮ್ಮನ್ನು ಅನುಕರಿಸುವುದರಿಂದ ಉಪನ್ಯಾಸಕರ ವರ್ತನೆ ಅನುಕರಣೀಯವಾಗಿರಬೇಕು ಎಂದರು.          ಸಂಪನ್ಮೂಲ ವ್ಯಕ್ತಿ ಎಸ್. ಬಸವರಾಜು ಮಾತನಾಡಿ,  ಧನಾತ್ಮಕ ಚಿಂತನೆಯಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಜೇನು ವಿವಿಧ ಹೂಗಳಿಂದ ಮಕರಂದ ಹೀರಿ ನಮಗೆ ಸಿಹಿಯನ್ನು ಕೊಡುವಂತೆ ವಿದ್ಯಾರ್ಥಿಗಳು ಸುಜ್ಞಾನದ ಮಕರಂದ ಹೀರಿ ಮೌಲ್ಯಪ್ರಜ್ಞೆ ಬೆಳೆಸಿಕೊಳ್ಳುವಂತೆ ಉಪನ್ಯಾಸಕರು ಪ್ರೇರೇಪಿಸಬೇಕು.  ಮನಸ್ಸು , ಆಲೋಚನೆಗೆ ಅವಿನಾಭಾವ ಸಂಬಂಧವಿದ್ದು ನಮ್ಮ ಮನಸ್ಸು ಚೆನ್ನಾಗಿದ್ದರೆ ಆಲೋಚನೆ ಚನ್ನಾಗಿರುತ್ತದೆ. ಉತ್ತಮ ಆಲೋಚನೆಯಿಂದ ನಮ್ಮ ವ್ಯಕ್ತಿತ್ವ ಪರಿಪಕ್ವಗೊಳ್ಳುತ್ತದೆ. ನಾವು ಸಹಾನುಭೂತಿ ಮತ್ತು ಸಹನಶೀಲತೆ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.ಡಯಟ್‌ನ ದೈಹಿಕ ಶಿಕ್ಷಕಿ ಶೋಭಾರಾಣಿ ಪ್ರಾರ್ಥಿಸಿದರು.  ಕೆ.ಜಿ. ಪ್ರಶಾಂತ್ ವಂದಿಸಿದರು. ಎಸ್.ಬಸವರಾಜ್ ನಿರೂಪಿಸಿದರು.