ವೃತ್ತಿ ಮೌಲ್ಯಗಳನ್ನರಿಯಲು ಉಪನ್ಯಾಸಕರಿಗೆ ಕರೆ


ಧಾರವಾಡ,ಜ.5-: ವೃತ್ತಿ ಬದುಕಿನುದ್ದಕ್ಕೂ ಸಮಯದ ಸದ್ಬಳಕೆಗೆ ಮೊದಲ ಆದ್ಯತೆ ನೀಡಿ ನಿರಂತರ ಅಧ್ಯಯನಶೀಲತೆಯೊಂದಿಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ವೃತ್ತಿ ಮೌಲ್ಯಗಳನ್ನರಿತು ತರಗತಿಗಳಲ್ಲಿ ಕ್ರಿಯಾಶೀಲ ಬೋಧನೆಗೆ ತೆರೆದುಕೊಳ್ಳಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಚಿದಂಬರ್ ಕೆ. ಉಪನ್ಯಾಸಕರಿಗೆ ಕರೆ ನೀಡಿದರು.
ಅವರು ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಇಲ್ಲಿಯ ಡಯಟ್ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ನೂತನವಾಗಿ ನೇಮಕಗೊಂಡ ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ಹಮ್ಮಿಕೊಂಡಿದ್ದ 7 ದಿನಗಳ ಪ್ರೇರಣಾ (ಇಂಡಕ್ಷನ್) ತರಬೇತಿ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು ವಿವಿಧ ರೀತಿಯ ವಿಶಿಷ್ಟ ಬೋಧನಾ ವಿಧಾನಗಳು, ವೃತ್ತಿ ಬದುಕಿನಲ್ಲಿ ಕ್ರಿಯಾ ಸಂಶೋಧನೆಯನ್ನು ರೂಢಿಸಿಕೊಳ್ಳುವುದು, ಮೌಲ್ಯಮಾಪನದ ಮಹತ್ವ ಅರಿಯುವುದು, ಇಲಾಖೆಯ ರಚನೆ ಮತ್ತು ಸಮಗ್ರ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಂತಾದ ಉಪನ್ಯಾಸಕ ಹುದ್ದೆಯ ವೃತ್ತಿಗೆ ಪೂರಕವಾದ ಅಂಶಗಳನ್ನು ಅರಿಯಲು 7 ದಿನಗಳ ಪ್ರೇರಣಾ (ಇಂಡಕ್ಷನ್) ತರಬೇತಿ ಮಾರ್ಗದರ್ಶನ ಮಾಡಲಿದೆ ಎಂದರು.
ವಿದ್ಯಾರ್ಥಿಗಳ ಕಲಿಕಾ ಬದುಕಿನಲ್ಲಿ 3ನೇ ಪ್ರಮುಖ ಘಟ್ಟವಾಗಿರುವ ಪದವಿಪೂರ್ವ ಶಿಕ್ಷಣವನ್ನು ವಿದ್ಯಾರ್ಥಿಗಳು ನಿಖರನೆಲೆಯಲ್ಲಿ ಅರಿಯುವಲ್ಲಿ ವಿದ್ಯಾರ್ಥಿಗಳ ಜೊತೆ ಪಠ್ಯಪೂರಕವಾದ ಕ್ರಿಯಾಪ್ರೇರಕ ಸಂವಹನ ಜರುಗಿಸಿ ಓರ್ವ ಶ್ರೇಷ್ಠ ಸುಗಮಕಾರರಾಗಿ ಮತ್ತು ಮಾರ್ಗದರ್ಶಕರಾಗಿ ಅವರ ಕಲಿಕಾ ಕಂದಕಗಳನ್ನು ನಿವಾರಿಸಲು ಪ್ರಸ್ತುತ ನೂತನವಾಗಿ ನೇಮಕಗೊಂಡ ಪದವಿಪೂರ್ವ ಕಾಲೇಜು ಉಪನ್ಯಾಸಕರು ಆಸಕ್ತಿಯಿಂದ ಶ್ರಮಿಸಬೇಕೆಂದು ಚಿದಂಬರ್ ಸಲಹೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ್ದೇಶಕ ಅಬ್ದುಲ್ ವಾಜೀದ್ ಖಾಜಿ ಮಾತನಾಡಿ, ಸರಕಾರಿ ಸೇವೆಯ ಎಲ್ಲಾ ಸೂಕ್ಷ್ಮ ನಿಯಮಾವಳಿಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ ಉಪನ್ಯಾಸಕ ವೃತ್ತಿಯ ಘನತೆಯನ್ನು ಅರಿತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಶ್ರಮಿಸಬೇಕು ಎಂದರು.
ತಾಲೂಕಾ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಹಾಗೂ ಕರಡಿಗುಡ್ಡ ಸರಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಎಸ್.ಎಂ. ಯಲಿಗಾರ ಹಾಗೂ ಡಯಟ್ ಉಪನ್ಯಾಸಕಿ ವಿಜಯಲಕ್ಷ್ಮಿ ಹಂಚಿನಾಳ ಇದ್ದರು. ತರಬೇತಿ ಶಿಬಿರದ ಜಿಲ್ಲಾ ನೋಡಲ್ ಅಧಿಕಾರಿ ಪಾರ್ವತಿ ವಸ್ತ್ರದ ಸ್ವಾಗತಿಸಿದರು. ಎಸ್.ಟಿ. ಅರಸನಾಳ ನಿರೂಪಿಸಿದರು. ತಬಸುಮ ಪಟ್ಟಣದ ವಂದಿಸಿದರು. ಧಾರವಾಡ ಜಿಲ್ಲೆಯ 18 ಹಾಗೂ ಉತ್ತರಕನ್ನಡ ಜಿಲ್ಲೆಯ 22 ಒಟ್ಟು 40 ಉಪನ್ಯಾಸಕರು ಪಾಲ್ಗೊಂಡಿದ್ದಾರೆ. ಮನೋವೈದ್ಯ ಡಾ. ಆನಂದ ಪಾಂಡುರಂಗಿ ಉಪನ್ಯಾಸಕರ ಜೊತೆ ಸಂವಹನ ನಡೆಸಿದರು.