ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ದಾವಣಗೆರೆ ಡಿ.೩೧: ಜೀವನದಲ್ಲಿ ಮೂಲಭೂತ ಅವಶ್ಯಕತೆಗಳನ್ನು ಉದ್ಯೋಗದಿಂದ ಮಾತ್ರ ಪೂರೈಸಿಕೊಳ್ಳಲು ಸಾಧ್ಯ. ಶಿಕ್ಷಣದೊಂದಿಗೆ ಉತ್ತಮ ಕೌಶಲ್ಯ, ತರಬೇತಿ ಹೊಂದಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಗಿರೀಶ್ ಕೆ ಎನ್ ಹೇಳಿದರು. ದಾವಣಗೆರೆಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಶ್ರೀಮಲ್ಲಿಕಾರ್ಜುನ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಒಂದು ವಾರಗಳ ಕಾಲ ನಡೆದ ವೃತ್ತಿ ಮಾರ್ಗದರ್ಶನದ ಮಾಹಿತಿಗಳನ್ನು ಆಧರಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸುತ್ತಾ ಕಿರಿಯ ತರಬೇತಿ ಅಧಿಕಾರಿಗಳಾದ ಅನೂಪ್ ಕುಮಾರ್ ಎನ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಪಾಠ ಮಾಡಿ ಪರೀಕ್ಷೆ ಮಾಡುತ್ತವೆ, ಆದರೆ ಜೀವನ ನಮಗೆ ಹಲವಾರು ಪರೀಕ್ಷೆಗಳನ್ನು ತಂದೊಡ್ಡಿ ಆನಂತರ ಪಾಠ ಕಲಿಸುತ್ತದೆ. ಹಾಗಾಗಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಶ್ರಮವಹಿಸಿ ದುಡಿಯಲು ಇಂತಹ ಕಾರ್ಯಕ್ರಮ ತುಂಬಾ ಮುಖ್ಯ ಎಂದರು.ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಭಿವೃದ್ಧಿ ನಿರ್ವಾಹಕ ಮೋಹನ್ ಕುಮಾರ್ ಜಿ ಎಸ್ ಮಾತನಾಡಿ, ಉತ್ತಮ ಕೌಶಲ್ಯ ತರಬೇತಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉದ್ಯೋಗದಾತರು ಕೈಬೀಸಿ ಕರೆಯುತ್ತಾರೆ ಎಂದು ಕಿವಿಮಾತು ಹೇಳಿದರು.ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಮಾಲೋಚಕರು ಮತ್ತು ತರಬೇತುದಾರರಾದ ಮಲ್ಲಿಕಾರ್ಜುನ್. ಎಸ್ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮಲ್ಲಿಕಾರ್ಜುನ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎನ್ ಜೆ ಗುರುಸಿದ್ಧಯ್ಯನವರು ಮಾತನಾಡುತ್ತಾ ಶಿಕ್ಷಣದ ಜೊತೆಗೆ ಪ್ರತಿಯೊಬ್ಬರಲ್ಲಿಯೂ ಅಡಕವಾಗಿರುವ ಕೌಶಲ್ಯವನ್ನು ವಿಕಾಸಗೊಳಿಸಿದಾಗ ಮಾತ್ರ ಅಂತಹ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ ಎಂದು ನುಡಿದರು.ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಹನುಮಂತರಾವ್ ಸಿಂಧೆ ನಡಿಸಿಕೊಟ್ಟರು. ಶಂಭುಲಿಂಗಪ್ಪ ಎಸ್ ವಿ ಸ್ವಾಗತಿಸಿದರು. ರಮೇಶ್ ಕೆ ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ದ್ವಿತೀಯ ದರ್ಜೆ ಸಹಾಯಕ ರವಿಕುಮಾರ್ ಆರ್ ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.