ವೃತ್ತಿ ಪಾವಿತ್ರ್ಯತೆ ರಕ್ಷಣೆ ಅಗತ್ಯ: ಪಂ.ಪ್ರಸನ್ನಾಚಾರ್ಯ

ಕಲಬುರಗಿ,ಜು 2: ವೈದ್ಯರು ಸದಾ ರೋಗಿಗಳ ಚಿಕಿತ್ಸೆಯತ್ತ ಗಮನ ಹರಿಸುವುದು ಹಾಗೂ ಪತ್ರಕರ್ತರು ಸದಾ ಸಾತ್ವಿಕ ಸುದ್ದಿಗಳನ್ನು ಪ್ರಕಟಿಸುವ ಮೂಲಕ ತಮ್ಮ ವೃತ್ತಿ ಪಾವಿತ್ರ್ಯತೆ ಕಾಪಾಡಿಕೊಳ್ಳವುದು ಅಗತ್ಯ ಎಂದು ಪಂ.ಪ್ರಸನ್ನಾಚಾರ್ಯ ಜೋಶಿ ಹೇಳಿದರು.
ಜಯತೀರ್ಥ ನಗರದ ಶ್ರೀ ಲಕ್ಷ್ಮಿನಾರಾಯಣ ಮಂದಿರದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ, ಲಕ್ಷ್ಮಿ ನಾರಾಯಣ ಹಾಗೂ ಹಂಸನಾಮಕ ಪಾರಾಯಣ ಸಂಘದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರು ಯಾವುದೇ ಕೆಲಸ ಮಾಡಲಿ ತಮ್ಮ ವೃತ್ತಿಯ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಅಂದಾಗ ಅಂಥವರನ್ನು ಸಮಾಜ ಗೌರವಿಸುತ್ತದೆ ಎಂದರು.
ಭಾರತದಲ್ಲಿ ಸನಾತನ ಕಾಲದಿಂದಲೂ ವೈದ್ಯಕೀಯ ಪದ್ಧತಿ ಚಾಲ್ತಿಯಲ್ಲಿತ್ತು. ಪತಂಜಲಿ ಋಷಿಗಳು ಯೋಗ ಪದ್ಧತಿಯನ್ನು ರಚಿಸಿ ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಋಷಿ ಮುನಿಗಳು ಕಾಡಿನಲ್ಲಿದ್ದು ನಾಡಿನ ಹಿತವನ್ನು ಬಯಸಿದ್ದಾರೆ. ಆದರೆ ನಾವು ನಾಡಿನಲ್ಲಿದ್ದುಕೊಂಡು ಕಾಡು ಹಾಗೂ ನಾಡನ್ನೂ ಹಾಳು ಮಾಡುತ್ತಿದ್ದೇವೆ ಎಂದರು.
ತಪ್ಪು ದಾರಿ ಹಿಡಿದ ಸಮಾಜವನ್ನು ಸರಿ ದಾರಿಗೆ ತರುವ ಕೆಲಸ ಪತ್ರಿಕಾ ಕ್ಷೇತ್ರ ನಿರಂತರವಾಗಿ ಮಾಡುತ್ತಲೇ ಬರುತ್ತಿದೆ. ನಾರದರು ಜಗತ್ತಿನ ಮೊದಲ ಪತ್ರಕರ್ತ ಎಂದರೆ ತಪ್ಪಾಗಲಾರದು. ನಾರದರು ಕೇವಲ ಲೋಕಹಿತದ ಪ್ರಚಾರ ಮಾಡುತ್ತಿದ್ದರು. ಪತ್ರಕರ್ತರು ಕೂಡ ಧರ್ಮದ ಮಾರ್ಗ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ವೈದ್ಯರಾದ ಡಾ. ಅಭಯ ಬೋರಗಾಂವಕರ್, ಡಾ. ಸದಾಶಿವ ಜಿಡಗೇಕರ್, ಡಾ. ಶ್ರೀನಿವಾಸರಾವ ಜಾಗೀರದಾರ, ಪತ್ರಕರ್ತರಾದ ಚಂದ್ರಶೇಖರ ಹಿರೇಮಠ, ನರಸಿಂಹಾಚಾರ್ಯ ಜೋಶಿ ಅವರನ್ನು ಸನ್ಮಾನಿಸಲಾಯಿತು.
ಕೃಷ್ಣ ಕಾಕಲವಾರ,ವಿಪ್ರ ಅರ್ಚಕರ ಸಂಘದ ಜಿಲ್ಲಾಧ್ಯಕ್ಷ ಗುಂಡಾಚಾರ್ಯ ಜೋಶಿ ನರಬೋಳಿ, ಖ್ಯಾತ ಮಕ್ಕಳ ವೈದ್ಯ ಡಾ. ರಮೇಶ ಯಳಸಂಗಿಕರ, ಪದ್ಮನಾಭ ಜೋಶಿ, ಸುರೇಶ ಕುಲಕರ್ಣಿ, ಅನೀಲ ಕುಲಕರ್ಣಿ, ಧನೇಶ ಮಾಲಗತ್ತಿ ಹಾಗೂ ಭಕ್ತ್ತರು ಪಾಲ್ಗೊಂಡರು.ಅಖಿಲಭಾರತೀಯ ಬ್ರಾಹ್ಮಣ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿ ಲಾತೂಕರಕರ ಸ್ವಾಗತಿಸಿದರು. ವಿನೂತ ಜೋಶಿ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.