ಚಾಮರಾಜನಗರ, ಜೂ.16- ವೃತ್ತಿ ನೈಪುಣ್ಯತೆಯನ್ನು ಹೊಂದಿ ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಂಡರೆ ಯಶಸ್ಮ್ಸ ಸಾಧಿಸುವ ಜೊತೆಗೆ ಹೆಚ್ಚಿನ ಸಂಪಾದನೆ ಮಾಡುವ ಮೂಲಕ ನೆಮ್ಮದಿ ಜೀವನ ನಡೆಸಲು ಸಾಧ್ಯವಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಪೂವಿತಾ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಮರಿಯಾಲ ಜೆಎಸ್‍ಎಸ್ ಐಟಿಐ ಕಾಲೇಜಿನಲ್ಲಿ ಜಿಲ್ಲಾ ಪಂಚಾಯತ್‍ನ ಗ್ರಾಮೀಣ ಕೈಗಾರಿಕೆ ಹಾಗೂ ಜೆಎಸ್‍ಎಸ್ ನೈಪುಣ್ಯತಾ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿವಿಧ ವೃತ್ತಿಗಳಲ್ಲಿ ಕೌಶಲ್ಯ ಅಭಿವೃದ್ದಿ ತರಬೇತಿ ಪಡೆದ ಫಲಾನುಭವಿಗಳಿಗೆ ತರಬೇತಿ ಅರ್ಹತಾ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತ್‍ನ ಗ್ರಾಮೀಣ ಕೈಗಾರಿಕೆ ಇಲಾಖೆಯು ಜೆಎಸ್‍ಎಸ್ ಸಂಸ್ಥೆಯ ಸಹಯೋಗದಲ್ಲಿ ಗ್ರಾಮಾಂತರ ಪ್ರದೇಶದ ನಿರುದ್ಯೋಗಿ ಯುವಕ ಯುವತಿಯರನ್ನು ಗುರುತಿಸಿ ಅವರು ಆಸಕ್ತಿ ಹೊಂದಿರುವ ವೃತ್ತಿಗಳ ತರಬೇತಿಯನ್ನು ನೀಡಿ, ಆ ವೃತ್ತಿಯಲ್ಲಿ ಅವರು ನೈಪುಣ್ಯತೆಯನ್ನು ಹೊಂದಿ, ಪಕ್ವತೆಯನ್ನು ಸಾಧಿಸಿ, ಸ್ವಂತ ಉದ್ಯೋಗವನ್ನು ಹೊಂದುವ ಮಟ್ಟಕ್ಕೆ ತರಬೇತಿ ನೀಡಿ ಸ್ವಾವಲಂಬನೆ ಜೀವನ ನಡೆಸುವಂತೆ ಮಾಡುತ್ತಿದ್ದಾರೆ. ಇಂಥ ತರಬೇತಿಗಳು ಬಹಳ ಉಪಯುಕ್ತವಾಗಿದ್ದು, ಜೀವನ ಮಟ್ಟವನ್ನು ಸುಧಾರಣೆ ಮಾಡಿಕೊಳ್ಳಲು ಒಳ್ಳೆಯ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಜೆಎಸ್‍ಎಸ್ ಸಂಸ್ಥೆಯು ಉತ್ತಮ ಹಾಗೂ ಶಿಸ್ತು ಬದ್ದವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಉದ್ಯೋಗವೇ ಬೇಕೆಂದು ಮನೆಯಲ್ಲಿದ್ದು ಕಾಲಹರಣ ಮಾಡುವ ಬದಲು ಇಂತಹ ತರಬೇತಿಗಳನ್ನು ಪಡೆದು ಸ್ವಂತ ಉದ್ಯೋಗ ಹೊಂದಿದರೆ, ತಮ್ಮ ದುಡಿಮೆ ಶ್ರಮದಿಂದ ಯಾವುದೇ ಇತಿಮಿತಿ ಇಲ್ಲದೇ ಸಂಪಾದನೆ ಮಾಡುವ ಅವಕಾಶ ಬಹಳಷ್ಟಿದೆ. ಇದಕ್ಕೆ ಕೌಶಲ್ಯ ನೈಪುಣ್ಯತೆಯು ಮುಖ್ಯವಾಗಿರುತ್ತದೆ. ಅತ್ಮಸ್ಥೈರ್ಯ ಮತ್ತು ಛಲ ಇದ್ದರೆ ಸಾಧನೆ ಮಾಡುವುದು ಕಷ್ಟವಲ್ಲ. ತರಬೇತಿ ಹೊಂದಿರುವ ಎಲ್ಲರು ಸಹ ಸ್ವಂತ ಉದ್ಯೋಗದಲ್ಲಿ ತೊಡಗಿ ಮತ್ತಷ್ಟು ಮಂದಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಪೂವಿತಾ ಶುಭ ಕೋರಿದರು.
ಗ್ರಾಮೀಣ ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೆ.ಎ. ರಾಜೇಂದ್ರ ಪ್ರಸಾದ್ ಮಾತನಾಡಿ, ಗ್ರಾಮೀಣ ಕೈಗಾರಿಕೆ ಇಲಾಖೆಯಿಂದ ಬಹಳಷ್ಟು ಯೋಜನೆಗಳನ್ನು ಜಾರಿ ಮಾಡಿದ್ದು, ವೃತ್ತಿ ಕೌಶಲ್ಯವನ್ನು ಪಡೆದುಕೊಳ್ಳೂವ ಜೊತೆಗೆ ಬ್ಯಾಂಕುಗಳಲ್ಲಿ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯಗಳನ್ನು ಪಡೆದು, ಉದ್ಯಮ ಆರಂಭಿಸಿ, ಹತ್ತಾರು ಮಂದಿಗೆ ಉದ್ಯೋಗ ನೀಡಿ, ಯಶಸ್ವಿ ಉದ್ಯಮಿದಾರರಾಗಬೇಕು ಎಂದು ಆಶಿಸಿದರು.
ಈಗಾಗಲೇ ಜೆಎಸ್‍ಎಸ್ ನೈಪುಣ್ಯತಾ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ನಮ್ಮ ಇಲಾಖೆಯಿಂದ ನಿರುದ್ಯೋಗಿಗಳಿಗೆ ಹ್ಯಾಂಡ್ ಎಂಬ್ರಾಯಿಡರಿ, ಬ್ಯೂಟಿಷಿಯನ್, ಫ್ಯಾಷನ್ ಡಿಸೈನರ್, ಕಂಪ್ಯೂಟರ್ ಹಾರ್ಡ್‍ವೇರ್ ಹಾಗೂ ಆಡ್ವಾನ್ಸ್ ಸೀವಿಂಗ್ ಮೆಷಿನ್ ಆಪರೇಟರ್ ಕೋರ್ಸುಗಳಿಗೆ ತರಬೇತಿಯನ್ನು ನೀಡಲಾಗಿದೆ. 178 ಮಂದಿ ಯಶಸ್ವಿಯಾಗಿ ಆಯಾ ತಾಲೂಕುಗಳಲ್ಲಿ ಯಶಸ್ವಿಯಾಗಿ ತರಬೇತಿಯನ್ನು ಪೂ ರ್ಣಗೊಳಿಸಿ, ಆರ್ಹತಾ ಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ತರಭೇತಿ ಪಡೆದ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಗ್ರಾಮೀಣ ಕೈಗಾರಿಕೆ ಮತ್ತು ಜೆಎಸ್‍ಎಸ್ ಸಂಸ್ಥೆಯು ಉಚಿತವಾಗಿ ತರಬೇತಿಯನ್ನು ಆಯೋಜನೆ ಮಾಡಿ, ತಾಲೂಕು ಕೇಂದ್ರಗಳಲ್ಲಿ 2 ತಿಂಗಳು ತರಬೇತಿಯನ್ನು ನೀಡಿದ್ದಾರೆ. ಇದರಿಂದ ನಾವೆಲ್ಲರು ಇನ್ನು ಹೆಚ್ಚಿನ ಕೌಶಲ್ಯವನ್ನು ಹೊಂದಿ, ವೃತ್ತಿಯಲ್ಲಿ ತೊಡಗಿಕೊಂಡು ಸ್ವಾವಲಂಬನೆಯಿಂದ ಜೀವನ ನಡೆಸಲು ಅನುಕೂಲವಾಗಿದೆ. ಹೀಗಾಗಿ ಅವರಿಗೆ ಎಲ್ಲರ ಪರವಾಗಿ ಧನ್ಯವಾದನ್ನು ತಿಳಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಸಂಸ್ಥೆಯ ಸಂಯೋಜನಾಧಿಕಾರಿ ವೈ.ಎಂ. ಸಾಸಲಾರಾಧ್ಯ ಅಧ್ಯಕ್ಷತೆ ವಹಿಸಿ ವೃತ್ತಿ ಕೌಶಲ್ಯ ಹಾಗೂ ಜೀವನ ಮೌಲ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು. ಪ್ರಾಚಾರ್ಯ ವೈ.ಎಂ. ರವಿಚಂದ್ರ, ಸಂಯೋಜಕರಾದ ಮಹದೇವಸ್ವಾಮಿ, ಮಂಜುನಾಥ್, ಸಂಸ್ಥೆಯ ಸಿಬ್ಬಂಧಿಗಳು ಹಾಗೂ ತರಬೇತುದಾರರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.