ವೃತ್ತಿ ಜೀವನ ಪ್ರತಿಯೊಬ್ಬರಿಗೂ ಮಾದರಿ-ರೆಡ್ಡೆಪ್ಪ ಹೊನ್ನಾಳಿ

ಅರಕೇರಾ.ನ.೧೦- ವೃತ್ತಿ ಜೀವನದಲ್ಲಿ ಪ್ರತಿಯೊಬ್ಬರೂ ಪ್ರಮಾಣಿಕರಾಗಿ ಸೇವೆ ಸಲ್ಲಿಸಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯ ರೆಡ್ಡೆಪ್ಪ ಹೊನ್ನಾಳಿ ಹೇಳಿದರು.
ತಾಲೂಕಿನ ಮುಷ್ಟೂರು ಗ್ರಾ.ಪಂ. ವ್ಯಾಪ್ತಿ ಗೆಜ್ಜೆಭಾವಿ ಅಂಗನವಾಡಿ ಕೇಂದ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಸೇರಿದಂತೆ ಕರೋನಾ ವಾರಿಯರ್‍ಸ್ ಆಗಿ ಕರ್ತವ್ಯ ನಿರ್ವಹಿಸಿದ ವಲಯದ ಅಂಗನವಾಡಿ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು. ನಿವೃತ್ತಿ ಹೊಂದಿದ ಶಿವಲಿಂಗಮ್ಮ ಹಾಗೂ ಬೀಬಿರವರ ಕಾರ್ಯ ಮರೆಯುವಂತಿಲ್ಲ. ವೃತ್ತಿ ನಿಷ್ಠೆ ಅವರನ್ನು ನೋಡಿ ಕಲಿಯಬೇಕು.
೩೫ ವರ್ಷಗಳ ಹಿಂದೆ ಅನೇಕ ಏಳು ಬೀಳುಗಳನ್ನು ಅವರು ಕಂಡಿದ್ದಾರೆ. ಎಂತಹ ಸಮಯದಲ್ಲೂ ಮಾತಿನ ಧಾಟಿ ಬದಲಿಸುತ್ತಿರಲಿಲ್ಲ. ಸೌಕರ್ಯಗಳ ಕೊರತೆಯ ನಡುವೆ ಅಂಗನವಾಡಿಯಲ್ಲಿ ಆಟ, ಪಾಟ, ಚಟುವಟಿಕೆಗಳನ್ನು ಉತ್ತಮವಾಗಿ ನಿಭಾಯಿಸುತ್ತಿದ್ದರು ಎಂದು ಸ್ಮರಿಸಿದರು. ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ರಾಠೋಡ್ ಮಾತನಾಡಿ, ಶಾಲಾ ಪೂರ್ವ ಶಿಕ್ಷಣದ ಮೂಲಕ ಮಕ್ಕಳ ಶ್ರೇಯೋಭಿವೃದ್ಧಿಯಾಗಲು ಸಾಧ್ಯವಾಗಲಿದೆ. ಗ್ರಾಮಸ್ಥರಿಂದ ಅಂಗನವಾಡಿ ಕಾರ್ಯಕ್ರಮಗಳಿಗೆ ಬಲ ತುಂಬಿದಂತಾಗಿದೆ. ಉತ್ತಮ ಸೇವೆ ಮಾಡಿದವರನ್ನು ಎಂತಹ ಸಮಯದಲ್ಲೂ ಗುರುತಿಸುತ್ತಾರೆ. ಎಂಬುದಕ್ಕೆ ಈ ಕಾರ್ಯಕ್ರಮ ನಿದರ್ಶನವಾಗಿದೆ ಎಂದರು.
ಗ್ರಾಪಂ ಸದಸ್ಯ ರಾಜಶೇಖರ ಪಾಟೀಲ್ ಮಾತನಾಡಿ, ಸಂತೋಷ ಹಾಗೂ ದುಃಖದ ಸಮ್ಮಿಲನವೇ ಬೀಳ್ಕೊಡುಗೆ ಸಮಾರಂಭ. ಕರೋನಾ ಸಂದರ್ಭದಲ್ಲಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು, ಅಂಗನವಾಡಿ, ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕರ್ತವ್ಯ ಮೆರೆದಿದ್ದಾರೆ ಎಂದು ಶ್ಲಾಘೀಸಿದರು. ಈ ವೇಳೆ ಅಂಗನವಾಡಿ ಮೇಲ್ವಿಚಾರಕಿಯರಾದ ಕಮಲಾಕ್ಷಿ, ಶಾಂತಬಾಯಿ, ಆರೋಗ್ಯ ಇಲಾಖೆಯ ವಸಂತ, ದೀಪಾ, ಶೃತಿ ಸಂಸ್ಕೃತಿ ಸಂಸ್ಥೆ ಅಧ್ಯಕ್ಷ ರಾಮಣ್ಣ ಎನ್ ಗಣೇಕಲ್, ಎಸ್ಡಿಎಂಸಿ ಅಧ್ಯಕ್ಷ ಅಮರೇಶ, ತೇಜರಾಜ ನಾಯಕ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮಸ್ಥರು ಉಪಸ್ಥಿತರಿದ್ದರು.