ವೃತ್ತಿ, ಕೌಶಲ್ಯ ಹೆಚ್ಚಿಸಿಕೊಳ್ಳಲು ಕರೆ

ಧಾರವಾಡ,ನ6- ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಕೌಶಲ್ಯ ಹಾಗೂ ಸಾಮಥ್ರ್ಯ ವೃದ್ಧಿಸಿಕೊಳ್ಳಬೇಕು ಅಂದಾಗ ಮಾತ್ರ ಉದ್ಯೋಗವಕಾಶಗಳು ಲಭ್ಯವಾಗುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಭಾಂಗಣದಲ್ಲಿ ಆಯೋಜಿಸಲಾದ ಸಂವಹನ ಕೂಟದ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅತಿಥಿ ಸ್ಥಾನವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಾಧ್ಯಮದ ವ್ಯಾಖ್ಯೆ ಬದಲಾಗಿದೆ. ವಿವಿಧ ಮಾಧ್ಯಮಗಳ ಕಾರ್ಯನಿರ್ವಹಣೆಗೆ ಬರವಣಿಗೆಯೇ ಮುಖ್ಯವಾಗಿದೆ. ಅದರ ಮಹತ್ವ ಎಂದೂ ಕಡಿಮೆಯಾಗಲಾರದು. ಉತ್ತಮ ಬರಹಗಾರರಾಗಬೇಕಾದರೆ ಮೊದಲು ಉತ್ತಮ ಓದುಗರಾಗಬೇಕು. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರಗಳಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಬೇಕು ಎಂದು ಹೇಳಿದರು.
ಬದುಕನ್ನು ಕಟ್ಟಿಕೊಳ್ಳಲು ಅನೇಕ ಮಾರ್ಗಗಳಿವೆ. ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಹಸಿದ ಹೊಟ್ಟೆ ಖಂಡಿತವಾಗಿ ಅನ್ನದ ಮಾರ್ಗವನ್ನು ತೋರಿಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಕಡಿಮೆ ಇದ್ದರೂ, ವಿದ್ಯಾರ್ಥಿಗಳು ತಮ್ಮ ಪ್ರಯತ್ನ ನಿಲ್ಲಿಸಬಾರದು. ಸದಾ ನಮ್ಮ ಕಾರ್ಯದಲ್ಲಿ ಬದ್ಧತೆ ಹಾಗೂ ಸಾಮಥ್ರ್ಯ ತೋರಿಸಿದಾಗ, ಇತರರು ನಮ್ಮನ್ನು ಗುರುತಿಸುತ್ತಾರೆ. ಕಲಿಸಿದ ಸಂಸ್ಥೆ ಹಾಗೂ ಗುರುಗಳನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ವಿಭಾಗದ ಮುಖ್ಯಸ್ಥ ಪೆÇ್ರ. ಜೆ.ಎಂ. ಚಂದುನವರ ಮಾತನಾಡಿ, ಮಾಧ್ಯಮ ಜಗತ್ತಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ದರಾಗಬೇಕಿದೆ ಜೀವನದಲ್ಲಿ ಯಾವುದೇ ಸಂದರ್ಭದಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದರು. ಕಠಿಣ ಪರಿಶ್ರಮದಿಂದ ಮಾತ್ರವೇ ಮುಂದೆ ಬರಲು ಸಾಧ್ಯ, ವಿದ್ಯಾರ್ಥಿಗಳ ಏಳಿಗೆಯಾದಾಗ ಮಾತ್ರ ಕಲಿಸಿದ ಗುರುಗಳಿಗೆ ಹಾಗೂ ಸಂಸ್ಥೆ ಸಾರ್ಥಕವೆನಿಸುತ್ತದೆ. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗದ ವಿದ್ಯಾರ್ಥಿಗಳು ವಿವಿಧ ದಿನಪತ್ರಿಕೆಗಳಿಗೆ ಬರೆದ ಲೇಖನಗಳ ಸಂಗ್ರಹ `ಮಾಧ್ಯಮ ಹೊಂಗಿರಣ’ ಪುಸ್ತಕವನ್ನು ಹಾಗೂ ಸಂವಹನಕೂಟದ ವಾರ್ಷಿಕ ವರದಿಯನ್ನು ಮಂಜುನಾಥ ಡೊಳ್ಳಿನ ಬಿಡುಗಡೆಗೊಳಿಸಿದರು ಬಸನಗೌಡ ಪಾಟೀಲ್ ವಾರ್ಷಿಕ ವರದಿ ವಾಚಿಸಿದರು. ನಿತೀಶ ಡಂಬಳ, ಪ್ರಶಾಂತ ಕಾಳೆ, ರಾಜಗುರು, ಸರಸ್ವತಿ ತಂತ್ರಿ ಅನುಭಗಳನ್ನು ಹಂಚಿಕೊಂಡರು. ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂಜಯಕುಮಾರ ಮಾಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲಾ ಹಾಗೂ ಕಮಲ ಪ್ರಾರ್ಥಿಸಿದರು. ಅವಧಾನಿ ಪರಿಚಯಿಸಿದರು. ಪ್ರೀತಿ ಕಾಮತ್ ನಿರೂಪಿಸಿದರು. ಸುಶ್ಮಿತ ಪಟ್ಟಣಶೆಟ್ಟಿ ವಂದಿಸಿದರು. ಅತಿಥಿ ಉಪನ್ಯಾಸಕ ಡಾ. ಮಂಜುನಾಥ ಅಡಿಗಲ್, ಬಸನಗೌಡ ಪಾಟೀಲ ಪಾಲ್ಗೊಂಡಿದ್ದರು.