ವೃತ್ತಿಯ ಯಶಸ್ಸಿಗೆ ಕೌಶಲ್ಯ ಅತ್ಯಗತ್ಯ ; ಡಾ. ರಮೇಶ್ ಗೋಪಾಲ್


ಸಂಜೆವಾಣಿ ವಾರ್ತೆ
ಬಳ್ಳಾರಿ, ಜು. 16: ಬದಲಾಗುತ್ತಿರು ಆಧುನೀಕತೆಯ ತಂತ್ರಜ್ಞಾನ ಬಳಕೆಗೆ ಪ್ರತಿಯೊಬ್ಬರೂ ಕೌಶಲ್ಯವನ್ನು ಪಡೆಯಬೇಕು ಎಂದು ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸ್ಕಿಲ್ ಡೆವಲಪ್‌ಮೆಂಟ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ರಮೇಶ್ ಗೋಪಾಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಶನಿವಾರ ನಡೆದ ವಿಶ್ವ ಕೌಶಲ್ಯ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನದ ಬಳಕೆ ದಿನೇ ದಿನೇ ಹೆಚ್ಚಾಗಿ ಕೌಶಲ್ಯ ಪಡೆದ ತಂತ್ರಜ್ಞರಿಗೆ ಹೆಚ್ಚಿನ ಬೇಡಿಕೆ ಇದೆ. ಕಾರಣ ಪ್ರತಿಯೊಬ್ಬರೂ ಕೌಶಲ್ಯವನ್ನು ಪಡೆದು ಸ್ಪರ್ಧಾತ್ಮಕವಾಗಿ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದರು.
ಸ್ಕಿಲ್ ಡೆವಲಪ್‌ಮೆಂಟ್ ಸಂಸ್ಥೆಯ ಅಧ್ಯಕ್ಷ ನಾಗಳ್ಳಿ ರಮೇಶ್ ಅವರು ಅತಿಥಿಗಳಾಗಿ ಮಾತನಾಡಿ, ಪ್ರಸ್ತುತ ಉದ್ಯೋಗ ಕ್ಷೇತ್ರದಲ್ಲಿ ಕೌಶಲ್ಯಪಡೆದವರಿಗೆ ಪ್ರಥಮ ಆದ್ಯತೆ ಸಿಕ್ಕಿದೆ. ಯಾವುದೇ ತಂತ್ರಜ್ಞಾನವನ್ನು ಬಳಕೆ ಮಾಡುವಲ್ಲಿ ಕೌಶಲ್ಯ ಹೊಂದಿದವರಿಗೆ ಸಾಕಷ್ಟು ಬೇಡಿಕೆ ಇದೆ. ಕಾರಣ ಪ್ರತಿಯೊಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ಕೌಶಲ್ಯವನ್ನು ಸಾಧಿಸಬೇಕು ಎಂದರು.
ಸ್ಕಿಲ್ ಡೆವಲಪ್‌ಮೆಂಟ್ ಸಂಸ್ಥೆಯ ಸಹ ಅಧ್ಯಕ್ಷ ರಾಮಕೃಷ್ಣ ರೇಣಿಗುಂಟ್ಲ ಮತ್ತು ಮೀಡಿಯಾ ಕಾರ್ಯ ನಿರ್ವಾಹಕ  ಟಿ. ಶ್ರೀನಿವಾಸ್ ಅವರು, ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ತರಬೇತಿ ಪಡೆದ ಅನೇಕರು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು, ಸಂಸ್ಥೆಯ ಗೌರವ, ಗುಣಮಟ್ಟ ಮತ್ತು ಶಿಸ್ತನ್ನು ಎಲ್ಲರಿಗೂ ತಿಳಿಸಿದ್ದಾರೆ. ನಮ್ಮ ಸಂಸ್ಥೆಯು ಗುಣಮಟ್ಟದ ತರಬೇತಿ ನೀಡುವುದರ ಜೊತೆಯಲ್ಲಿ ನಾಯಕತ್ವದ ಗುಣಗಳನ್ನೂ, ಪರಸ್ಪರ ತಂಡವಾಗಿ ಕೆಲಸ ಮಾಡುವುದನ್ನೂ ತಿಳಿಸಿಕೊಡುತ್ತಿದೆ ಎಂದರು.
ಬಿ. ಪ್ರವಿತ್ರಾ ಪ್ರಾರ್ಥನೆ ಮಾಡಿದರು. ಕೆ.ಎನ್. ಶ್ವೇತ ಅವರು ಸ್ವಾಗತ ಕೋರಿದರು. ಕೆ. ಪರಶುರಾಮ್ ಅವರು ಕಾರ್ಯಕ್ರಮ ನಿರೂಪಿಸಿದರು. ಎನ್. ರೇಖಾ ವಂದನಾರ್ಪಣೆ ಸಲ್ಲಿಸಿದರು.