ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳ ಸ್ವಾವಲಂಬಿ ಬದುಕಿಗೆ ಪೂರಕ

ಚಿತ್ತಾಪುರ:ಅ.15: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಪಡೆಯುವುದರಿಂದ ಭವಿಷ್ಯದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯ ಎಂದು ನಾಗಾವಿ ಸಾಹಿತ್ಯ ಸಾಂಸ್ಕøತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.

ಪಟ್ಟಣದ ನಾಗಾವಿ ಕ್ಯಾಂಪಸ್‍ನಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ ಕಾಲೇಜು) ಯಲ್ಲಿ ಹಮ್ಮಿಕೊಂಡಿದ್ದ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಐಟಿಐ ಕೋರ್ಸ್ ಮಾಡಿದವರು ದೇಶದ ಯಾವ ಭಾಗದಲ್ಲಾದರೂ ಕೆಲಸ ಮಾಡಬಹುದು ಖಾಸಗಿ ಕಂಪೆನಿಗಳಲ್ಲಿ ಅನೇಕ ಅವಕಾಶಗಳಿವೆ ಬರೀ ಸರಕಾರಿ ಹುದ್ದೆಯ ಮೇಲೆಯೇ ಅವಲಂಬನೆ ಆಗಿರಬಾರದು, ಪ್ರಪಂಚ ವಿಶಾಲವಾಗಿದೆ ಅನೇಕ ಕ್ಷೇತ್ರಗಳಿವೆ ಪ್ರಯತ್ನ ಮಾಡಬೇಕು ಯಾವತ್ತೂ ನಿರಾಶೆಗೆ ಒಳಗಾಗಬಾರದು ಕಲಿತ ವಿದ್ಯೆ ಯಾವತ್ತಾದರೂ ಸಹಾಯಕ್ಕೆ ಬರಲಿದೆ ಇದು ಖಚಿತ ಎಂದು ಕಿವಿಮಾತು ಹೇಳಿದರು.

ಕೈಗಾರಿಕಾ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ಕೌಶಲ್ಯತೆ, ಬುದ್ದಿವಂತಿಕೆ ಹಾಗೂ ಚಾಣಾಕ್ಷತೆ ಅಲ್ಲದೇ ಏಕಾಗ್ರತೆ ಹೆಚ್ಚು ಇರುತ್ತದೆ. ಐಟಿಐ ಕೋರ್ಸ್ ಪೂರ್ಣಗೊಳಿಸಿದವರಿಗೆ ಉದ್ಯೋಗ ಅವಕಾಶ ದೊರಕುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಘಟಿಕೋತ್ಸವ ಈಗ ಐಟಿಐ ಕಾಲೇಜಿನಲ್ಲಿ ನಡೆಯುತ್ತಿದೆ. ಇದು ಯುವಜನರ ಕೌಶಲ್ಯ ಅಭಿವೃದ್ದಿಗೆ ದಿಕ್ಸೂಚಿಯಾಗಿದೆ. ಪ್ರಸ್ತುತ ಶಿಕ್ಷಣದಲ್ಲಿ ಅನೇಕ ವೃತ್ತಿಪರ ಕೋಸ್ರ್ಗಳಿವೆ ಹಾಗಾಗಿ ಆಸಕ್ತಿ ಇರುವ ಕೋಸ್ರ್ನಲ್ಲಿ ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಗುಂಡೇರಾವ ಕುಲಕರ್ಣಿ ಮಾತನಾಡಿ, ಐಟಿಐ ಪೂರ್ಣಗೊಳಿಸಿದವರಿಗೆ ಉತ್ತಮ ಅವಕಾಶಗಳಿವೆ. ವೃತ್ತಿ ಕೇಂದ್ರಿತವಾದ ಇದು ಉತ್ತಮ ಸಾಧನೆಯನ್ನು ಮಾಡಲು ಅವಕಾಶವಿದೆ. ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರಗಳು ತರಬೇತಿದಾರರ ಕೌಶಲ್ಯದ ಮಹತ್ವ ತಿಳಿಸುವಂತಿದೆ. ಇದರ ಮಹತ್ವ ಹೆಚ್ಚಾಗಬೇಕಾದರೆ ತರಬೇತಿಯಲ್ಲಿನ ಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.

ಕಾಲೇಜಿನ ಉಪನ್ಯಾಸಕ ಸುಧೀರ ಕಲಬುರಗಿ, ಪತ್ರಕರ್ತ ಜಗದೇವ ಕುಂಬಾರ, ಅತಿಥಿ ಉಪನ್ಯಾಸಕ ಅನ್ವಾರ್ ಖಾನ್, ಪ್ರವೀಣ ಗಾದಾ, ವಿರೇಶ ಎಸ್‍ಎಂಇ, ರಾಜಶೇಖರ ಟಾಟಾ ಇತರರು ಇದ್ದರು.