ವೃತ್ತಿಪರ ಶಿಕ್ಷಣದಲ್ಲಿ ಹೆಚ್ಚಿನ ಮಟ್ಟದಲ್ಲಿ ಕನ್ನಡ ಪಠ್ಯ ಬರಬೇಕು ಸೇವೆಗೆ ಸಿಕ್ಕ ಪುರಸ್ಕಾರ: ಗೋವಿಂದಪ್ಪ ದಡ್ಡಿ

ಹೊಸಪೇಟೆ ನ 03: ನಾಡೋಜ ಪದವಿಗೆ ಆಯ್ಕೆಯಾಗಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ 67 ವರ್ಷದ ಡಾ.ಹಣಮಂತ ಗೋವಿಂದಪ್ಪ ದಡ್ಡಿ ಅವರು ಸಂಜೆವಾಣಿಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡು. ವೈದ್ಯಕೀಯ ಮತ್ತು ತಾಂತ್ರಿಕ ವೃತ್ತಿಪರ ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕನ್ನಡ ಪಠ್ಯ ಬರಬೇಕು ಇದರಿಂದ ಬಹಳ ಜನಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.
ಕನ್ನಡ ಭಾಷೆಯ ಸ್ವಾಭಿಮಾನ ಹೊಂದಿರಬೇಕು ಅದರೆ ಅನ್ಯ ಭಾಷೆಯ ದುರಾಭಿಮಾನವನ್ನು ಹೊಂದಿರಬಾರದು. ಬೇರೆ ಭಾಷೆಯನ್ನು ಸಂಪರ್ಕ, ಸಂವಹನ ಭಾಷೆಯನ್ನಾಗಿ ಬಳಸಿದಾಗ ಬೇರೆಡೆ ಗುರುತಿಸುಕೊಳ್ಳುವಲ್ಲಿ, ಇತರ ವಿಷಯಗಳನ್ನು ಗ್ರಹಿಸುವಲ್ಲಿ, ಜ್ಞಾನ ಬೆಳವಣಿಗೆಗೆ ಅದು ಪೂರಕವಾಗಲಿದೆ ಎಂಬುದು ನಾಡೋಜ ಪುರಸ್ಕೃತರ ಅಭಿಪ್ರಾಯವಾಗಿದೆ.
ಕಳೆದ ನಲವತ್ತು ವರ್ಷದ ಸೇವೆಗೆ ಸಿಕ್ಕ ಪುರಸ್ಕಾರ ಇದಾಗಿದೆ. ಪದವಿ ನೀಡಿರುವುದಕ್ಕೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಅಭಾರಿಯಾಗಿದ್ದೇನೆ. ವೈದ್ಯಕೀಯ ಕ್ಷೇತ್ರದ ನನ್ನ ಸೇವೆಗೆ ಸದಾ ಬೆನ್ನೆಲುಬು ಆಗಿರುವ ಪತ್ನಿ ಕಾಶಿಬಾಯಿ, ಮಕ್ಕಳಾದ ಶಿಲ್ಪ ಮತ್ತು ಸಮೀರ ಹಾಗೂ ಬಂಧು, ಹಿತೈಷಿಗಳಿಗೆ ಈ ಗೌರವ ಸಲ್ಲುತ್ತದೆ ಎಂದಿದ್ದಾರೆ
ಜಮಖಂಡಿಯ ಈ ಡಾಕ್ಟರ್
ಚರಿತ್ರೆಯಲ್ಲೂ ಪಾಮರರು
ಬರೋಬ್ಬರಿ ನಲವತ್ತು ವರ್ಷಗಳ ಕಾಲದಿಂದ ವೈದ್ಯಕೀಯ ಕ್ಷೇತ್ರ ಹಾಗೂ ಸಾಹಿತ್ಯ, ಚರಿತ್ರೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ಡಾ.ಹಣಮಂತ ಗೋವಿಂದಪ್ಪ ದಡ್ಡಿ ಅವರು ವೈದ್ಯಕೀಯ ಪದವಿ ಜತೆಗೆ ಡಿಪೆÇ್ಲೀಮಾ ಇನ್ ಹೆಚ್.ಐ.ವಿ/ಏಡ್ಸ್ ಅಧ್ಯಯನ ಪರಿಣತರು. 1976ರಲ್ಲಿ ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು ನಂತರ ತಜ್ಞ ವೈದ್ಯ, ಹಿರಿಯ ತಜ್ಞ ವೈದ್ಯ, ತಾಲೂಕು ವೈದ್ಯಾಧಿಕಾರಿ ಹಾಗೂ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ 1999ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿ ನಂತರ ತಮ್ಮ ಊರಿನಲ್ಲಿ 20 ಹಾಸಿಗೆ ಆಸ್ಪತ್ರೆಯನ್ನು ಆರಂಭಿಸಿ ಇಂದಿಗೂ ನಡೆಸುತ್ತಿದ್ದಾರೆ.
ಹೆಚ್.ಐ.ವಿ/ಏಡ್ಸ್ ನಿಯಂತ್ರಣದ ಬಗ್ಗೆ ರಾಜ್ಯದ ವಿವಿಧ ವೈದ್ಯಕೀಯ ಸಂಸ್ಥೆಗಳ ಸುಮಾರು 400 ವೈದ್ಯರಿಗೆ ತರಬೇತಿ ನೀಡಿದ್ದಾರೆ. ಸರಕಾರಿ ಇಲಾಖೆ, ಕಾರ್ಖಾನೆ, ಕಾಲೇಜು, ಹಳ್ಳಿಗಳಿಗೆ ತೆರಳಿ ಸಾರ್ವಜನಿಕರಿಗೆ ಹೆಚ್‍ಐವಿ ಕುರಿತು ತಿಳುವಳಿಕೆ ಶಿಬಿರಗಳನ್ನು ನಡೆಸಿ ಜಾಗೃತಿ ಮೂಡಿಸಿದ್ದಾರೆ. 2007ರಲ್ಲಿ ಹೆಚ್‍ಐವಿ ಸೋಂಕಿತರಿಗಾಗಿ ಫ್ರೀಡಂ ಫೌಂಡೇಷನ್ ಘಟಕ ಸೇರಿದಂತೆ ಹಲವಾರು ವೈದ್ಯಕೀಯ ಕ್ಷೇತ್ರದ ಸೇವೆಗಳನ್ನು ನಿರ್ವಹಿಸುತ್ತಿದ್ದಾರೆ.
ವೈದ್ಯಕೀಯ ಕ್ಷೇತ್ರದ ಜತೆಗೆ ಚರಿತ್ರೆ ವಿಷಯದಲ್ಲೂ ಆಸಕ್ತಿ ಹೊಂದಿದ ಡಾ.ದಡ್ಡಿ ಅವರು ಸ್ಮಾರಕಗಳ ರಕ್ಷಣೆಗಾಗಿ ಸ್ಮಾರಕ ಉಳಿಸಿ ಎಂಬ ಅಬಿಯಾನವನ್ನು 2007ರಿಂದ ಆರಂಭಿಸಿ ಜಾಗೃತಿ ಕಾರ್ಯ ನಿರ್ವಹಿಸುವ ಜೊತೆಗೆ ಆದಿಲ್ ಶಾಹಿ ಪರಂಪರೆ ಮತ್ತು ಬಿಜಾಪುರದ ಪಾರಂಪರಿಕ ಸ್ಥಳದ ಕುರಿತು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ.
ಡಾ.ದಡ್ಡಿ ಅವರಿಗೆ 2000ದಲ್ಲಿ ಭಾರತ ಗೌರವ, ಡಾಕ್ಟರ್ ಆಫ್ ಮಿಲೇನಿಯಂ, 2005ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಡಾ.ಬಿ.ಸಿ.ರಾಯ್ ಪ್ರಶಸ್ತಿಯನ್ನು 2018ರಲ್ಲಿ ಪಡೆದಿದ್ದಾರೆ.
ವೈದ್ಯಕೀಯ ಸೇವೆ, ಚರಿತ್ರೆ ಸಂಶೋಧನೆ ಹಾಗೂ ಸಾಹಿತ್ಯ ಕೊಡುಗೆಗಳನ್ನು ಗುರುತಿಸಿ ಕನ್ನಡ ವಿಶ್ವವಿದ್ಯಾಲಯವು 28ನೇ ನುಡಿಹಬ್ಬದ ಅಂಗವಾಗಿ ಡಾ.ಹಣಮಂತ ಗೋವಿಂದಪ್ಪ ದಡ್ಡಿ ಅವರಿಗೆ ನಾಡೋಜ ಪದವಿಯನ್ನು ನೀಡಿ ಗೌರವಿಸುತ್ತಿದೆ.

ವಿಶೇಷ ವರದಿ:ಅಭಿಷೇಕ್