ವೃತ್ತಿಪರ ಕೋರ್ಸ್ ಪ್ರವೇಶ ಸಿಇಟಿ ಅಂಕ ಪರಿಗಣಿಸಿ

ಬೆಂಗಳೂರು,ಜೂ. ೫- ವೃತ್ತಿಪರ ಕೋರ್ಸ್‌ಗಳ ಪ್ರವೇಶ ಸಂದರ್ಭದಲ್ಲಿ ಸಿಇಟಿ ಪರೀಕ್ಷೆಗಳ ಅಂಕಗಳನ್ನು ಮಾತ್ರ ರ್‍ಯಾಂಕಿಂಗ್‌ಗೆ ಪರಿಗಣಿಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ದಾಖಲಾತಿಗೆ ಕ್ರಮಕೈಗೊಳ್ಳುವಂತೆ ಸಚಿವ ಸುರೇಶ್‌ಕುಮಾರ್ ಸಲಹೆ ಮಾಡಿದ್ದಾರೆ.
ಈ ಸಂಬಂಧ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಪತ್ರ ಬರೆದಿರುವ ಸಚಿವ ಸುರೇಶ್‌ಕುಮಾರ್, ಈ ಬಾರಿಗೆ ಸೀಮಿತಗೊಂಡಂತೆ ವೃತ್ತಿಪರ ಕೋರ್ಸ್‌ದಾಖಲಾತಿಗೆ ದ್ವಿತೀಯ ಪಿಯುಸಿ ಅಂಕವನ್ನು ಪರಿಗಣಿಸದೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸುವಂತೆ ಹೇಳಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳು ರದ್ದಾಗಿ ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಪ್ರಥಮ
ಪಿಯು ಅಂಕ ಮತ್ತು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪರಿಗಣಿಸಿ ಅದಕ್ಕೆ ಸಮನಾದ ಸೂಕ್ತ ಮೌಲ್ಯವನ್ನು ಸೇರ್ಪಡಿಸಿ ಗ್ರೇಡಿಂಗ್ ಫಲಿತಾಂಶವನ್ನೂ ಸಹ ನೀಡಲು ನಿರ್ಧಾರ ಮಾಡಿದ್ದೇವೆ. ಯಾವುದೇ ವಿದ್ಯಾರ್ಥಿ ತನ್ನ ಫಲಿತಾಂಶದ ಬಗ್ಗೆ ತೃಪ್ತಿ ಹೊಂದದೇ ಇದ್ದಲ್ಲಿ ಮುಂದೆ ನಡೆಸಲಾಗುವ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ಹಾಗಾಗಿ, ಸಿಇಟಿ ಪರೀಕ್ಷೆಗೆ
ದ್ವಿತೀಯ ಪಿಯುಸಿ ಅಂಕವನ್ನು ಪರಿಗಣಿಸಿದರೆ ಮುಂದೆ ಫಲಿತಾಂಶ ಪ್ರಶ್ನಿಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಬಹುದು. ಹಾಗಾಗಿ, ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸುವುದು ಸೂಕ್ತ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.