ವೃಕ್ಷತ್ಥಾನ ಹೆರಿಟೇಜ್ ರನ್ ಕುರಿತು ಪಿಯು ಕಾಲೇಜ ಆಡಳಿತ ಮಂಡಳಿ ಸಭೆ

ವಿಜಯಪುರ:ಡಿ.8:ನಗರದಲ್ಲಿ ಡಿ. 24 ರಂದು ನಡೆಯಲಿರುವ ವೃಕ್ಷತ್ಥಾನ್ ಹೆರಿಟೇಜ್ ರನ್- 2023ಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಉಪನಿರ್ದೇಶಕ ಡಾ. ಸಿ. ಕೆ. ಹೊಸಮನಿ ಹೇಳಿದ್ದಾರೆ.

ನಗರದ ಕೆಸಿಪಿ ಕಾಲೇಜಿನಲ್ಲಿ ಮಂಗಳವಾರ ನಡೆದ ಜಿಲ್ಲಾ ಪಿಯು ಕಾಲೇಜುಗಳ ಆಡಳಿತ ಮಂಡಳಿಯ ಸಭೆಯಲ್ಲಿ ಅವರು ಮಾತನಾಡಿದರು.ಗೆ

ಪರಿಸರ ಸಂರಕ್ಷಣೆ ಜೊತೆಗೆ ಪ್ರಾಚೀನ ಸ್ಮಾರಕಗಳ ಬಗ್ಗೆ ಜಾಗೃತಿ ಮೂಡಿಸಲು ಯೋಜಿಸಲಾಗಿರುವ ಈ ರನ್‍ಗೆ ಜಿಲ್ಲೆಯಷ್ಟೇ ಅಲ್ಲ, ಹೊರ ರಾಜ್ಯಗಳು ಮತ್ತು ವಿದೇಶಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಪಿಯು ಕಾಲೇಜಿನ ಯುವಕರು ಮತ್ತು ಯುವತಿಯರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪರಿಸರಕ್ಕೆ ಪೂರಕವಾಗಿರುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜಾಗೃತಿ ಮೂಡಿಸಬೇಕು ಎಂದು ಅವರು ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೃಕ್ಷತ್ಥಾನ್ ಹೆರಿಟೇಜ್ ರನ್- 2023ರ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ, ಈ ಕಾರ್ಯಕ್ರಮದಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಗಿಡಮರಗಳ ಸಂಖ್ಯೆ ಹೆಚ್ಚಳವಾಗಲಿದೆ. ನಡೆದಾಡುವ ದೇವರು ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥವಾಗಿಯೂ ಈ ರನ್ ನಡೆಯುತ್ತಿರುವುದರಿಂದ ಸಮಾಜದ ಎಲ್ಲರ ಸಂಪೂರ್ಣ ಸಹಕಾರ ಸಿಗುತ್ತಿದೆ. ಎಲ್ಲರೂ ಇದರಲ್ಲಿ ಪಾಲ್ಗೊಂಡು ಅಭೂತಪೂರ್ವ ಯಶಸ್ಸಿನಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.

ಈ ಸಭೆಯಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ 116 ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಕೆಪಿಸಿ ಸಾಯಿನ್ಸ್ ಕಾಲೇಜಿನ ಪ್ರಾಚಾರ್ಯ ಸಿ. ಬಿ. ಪಾಟೀಲ, ವೃಕ್ಷೊತ್ಥಾನ್ ಹೆರಿಟೇಜ್ ರನ್- 2023ರ ನೋಂದಣಿ ಸಮಿತಿಯ ಮುಖಂಡ ಮಲ್ಲಿಕಾರ್ಜುನ ಯಲಗೊಂಡ ಮುಂತಾದವರು ಉಪಸ್ಥಿತರಿದ್ದರು.