ವೀ.ವಿ ಸಂಘದ ಸದಸ್ಯತ್ವ
ಸಭೆಯಲ್ಲಿ ಚರ್ಚಿಸಿ ನಿರ್ಧಾರ: ಗುರುಸಿದ್ದಸ್ವಾಮಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.17: ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ನೂತನ ಸದಸ್ಯತ್ವ ನೀಡಬೇಕೆಂಬ ನಿಮ್ಮ ಬೇಡಿಕೆಯನ್ನು ಇಂದು ನಡೆಯುವ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಂ.ಗುರುಸಿದ್ದಸ್ವಾಮಿ ಹೇಳಿದ್ದಾರೆ
ಸಂಘದ ಕಚೇರಿ ಮುಂದೆ ನಿನ್ನೆಯಿಂದ ಸದಸ್ಯತ್ವಕ್ಕಾಗಿ ಆಗ್ರಹಿಸಿ ಸಂಘದ ಕಚೇರಿ ಮುಂದೆ ಆರಂಭಿಸಿರುವ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಕಾರ್ಯದರ್ಶಿ ಬಿ.ವಿ
ಬಸವರಾಜ್ ಅವರೊಂದಿಗೆ ಆಗಮಿಸಿ ಹೋರಾಟಗಾರರಿಂದ ಮನವಿ ಸ್ವೀಕರಿಸಿ ಮಾತನಾಡುತ್ತಿದ್ದರು. ಹೋರಾಟಗಾರರೊಡನೆ ಚರ್ಚಿಸಿ. ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ ಇಂದಿನ ಸಭೆಯಲ್ಲಿ ಮಂಡಿಸಲಿದೆಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸಂಚಾಲಕ ಮೀನಳ್ಳಿ ಚಂದ್ರಶೇಖರ್ ಮಾತನಾಡಿ.
ವೀರಶೈವ ಸಮಾಜದ ಉದ್ಧಾರಕ್ಕಾಗಿ ಹಿರಿಯರು ಮತ್ತು ಪೂಜ್ಯರು ವೀರಶೈವ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿ, ಈ ಭಾಗದ ವೀರಶೈವರಿಗೆ ಉನ್ನತ ಶಿಕ್ಷಣಕ್ಕಾಗಿ ಶಾಲಾ ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಜನಮುಖಿ ಮತ್ತು ಸಮಾಜಮುಖಿಯಾಗಿರಬೇಕಾದ ಸಂಘವು ಇಂದು ಬಂಡವಾಳಶಾಹಿ ಮತ್ತು ಶ್ರೀಮಂತರ ಸೊತ್ತಾಗಿದೆಯೆಂಬಂತೆ ಅದರ ನಡವಳಿಕೆ ಕಾಣುತ್ತಿದೆ.
ಬೈಲಾ ಪ್ರಕಾರ ಸದಸ್ಯತ್ವ ನೀಡವದನ್ನು ಪ್ರಾರಂಭಿಸಿವುದು ಮತ್ತು ಮುಕ್ತಾಯಗೊಳಿಸಬೇಕೆಂಬ ಯಾವುದೇ ನಿಯಮವಿರದಿದ್ದರು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಘವನ್ನು ಗುತ್ತಿಗೆ ಹಿಡಿದಂತೆ ತಮ್ಮ ಕಪಿಮುಷ್ಟಿಯಲ್ಲಿ ಸಂಘವು ಇರಬೇಕೆಂಬ ಉದ್ದೇಶದಿಂದ ನೂತನ ಸದಸ್ಯತ್ವಕ್ಕೆ ಅಡ್ಡಗಾಲು ಹಾಕಿ ಈಗ ಬೈಲಾ ತಿದ್ದುಪಡಿಯ ನೆಪವೊಡ್ಡಿ ನೂತನ ಸದಸ್ಯರನ್ನು ಸಂಘಕ್ಕೆ ಸೇರ್ಪಡೆ ಮಾಡಲು ಕಾಲಹರಣ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಆರೋಪಿಸಿದರು.
ನಾವು ಅನೇಕ ಬಾರಿ ನೂತನ ಸದಸ್ಯತ್ವ ಕೋರಿ ಮನವಿ ಕೊಟ್ಟಾಗಲು ವಿನಾಕಾರಣ ಸುಳ್ಳ ನೆಪಗಳನ್ನು ಹೇಳಿ ಮುಂದೂಡುತ್ತಿರುವುದು ಬಂಡವಾಳಶಾಹಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ.
ಇದ್ದಕ್ಕಿದ್ದಂತೆ ನಿಮಗೆ ಬೇಕಾದವರಿಗೆ 1 ಲಕ್ಷ ರೂಪಾಯಿಗಳನ್ನು ನೀಡಿ ಸದಸ್ಯತ್ವವನ್ನು ಪಡೆಯಲು ಹಲವಾರು ಅರ್ಜಿಗಳನ್ನು ತೆಗೆದುಕೊಂಡಿರುತ್ತೀರಿ ಎಂಬ ಮಾಹಿತಿ ಇದು ನ್ಯಾಯವೇ.
ತಮ್ಮ ನಾಯಕತ್ವದಲ್ಲಿ ಚುನಾವಣೆ ಪ್ರಚಾರದ ಪೂರ್ವಭಾವಿ ಸಭೆ ಅಲ್ಲಂ ಭವನದಲ್ಲಿ ನಡೆದ ಸಭೆಯಲ್ಲಿ ತಾವುಗಳು ತಮ್ಮ ತಂಡ ಅಧಿಕಾರಕ್ಕೆ ಬಂದರೆ ಹೊಸದಾಗಿ ಸದಸ್ಯತ್ವವನ್ನು ತೆಗೆದುಕೊಳ್ಳುತ್ತೇವೆಂದು ಆಶ್ವಾಸನೆ ನೀಡಿದ್ದಿರಿ, ಅದಲ್ಲದೆ ಪ್ರತಿಯೊಂದು ತಾಲೂಕಿನ ಪ್ರಚಾರದ ಸಮಯದಲ್ಲಿ ಇದೇ ಭರವಸೆ ನಿಡಿದ್ದಿರಿ. ಆದರೆ ಅಧಿಕಾರಕ್ಕೆ ಬಂದ ತಕ್ಷಣ ನೀವು ಮರೆತಂತೆ ಕಾಣಿಸುತ್ತದೆ. ವಿ.ವಿ. ಸಂಘದ ಸದಸ್ಯತ್ವವನ್ನು ಪಡೆದುಕೊಳ್ಳುವುದು ವೀರಶೈವರಾದ ನಮ್ಮ ಹಕ್ಕು ಇದನ್ನು ತಪ್ಪಿಸಲು ಪ್ರಯತ್ನಿಸಿದರೆ ತಪ್ಪಾಗುತ್ತದೆ. ಸಂಘರ್ಷಕ್ಕೆ ಹಾದಿ ಮಾಡಿಕೊಡದೆ ಸೌಹಾರ್ಧಯುತವಾಗಿ ಸದಸ್ಯತ್ವ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಕೋರಿದರು.
ಸಂಘದ ಕಾರ್ಯಕಾರಿ ಸಮಿತಿಯ ಇಂದಿನ ಸಭೆಯಲ್ಲಿ ಈ ಕುರಿತು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇಂದು ಸತ್ಯಸಗ್ರಹದಲ್ಲಿ ಜಿಲ್ಲೆಯ ವಿವಿಧ ಗ್ರಾಮ, ನಗರಗಳಿಂದ ನೂರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.