
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಆರ್.ರಾಮನಗೌಡ ಕಾರ್ಯದರ್ಶಿಯಾಗಿ ಹೆಚ್.ಎಂ.ಗುರುಸಿದ್ದಸ್ವಾಮಿ ಇವರು ಇಂದು ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆಯಾಗಿದ್ದಾರೆ.

ಕಳೆದ ಬಾರಿ ಯುವಕ ವೃಂದದ ಶಾಂತನಗೌಡ, ಕಿರಣ್, ಬೆಂಬಲದಿಂದ ಹಿರಿಯರ ಗುಂಪಿನ ಹೆಚ್.ಎಂ.ಗುರುಸಿದ್ದಸ್ವಾಮಿ ಅಧ್ಯಕ್ಷರಾಗಿ ಮತ್ತು ಬಿ.ವಿ ಬಸವರಾಜ್ ಅವರು ಕಾರ್ಯದರ್ಶಿಯಾಗಿದ್ದರು.
ಎರೆಡು ವರ್ಷ ಅವಧಿ ಮುಗಿದಿದ್ದು ಉಳಿದ ಒಂದು ವರ್ಷದ ಅವಧಿಗೆ ಸ್ಥಾನ ಬದಲಾವಣೆ ಬಯಸಿ ಈ ಇಬ್ವರು ರಾಜೀನಾಮೆ ಸಲ್ಲಿಸಿದ್ದರು.
ಇಂದು ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರ ರಾಜೀನಾಮೆ ಅಂಗೀಕಾರ ಮಾಡಲಾಯ್ತು ನಂತರ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಹಿರಿಯರ ತಂಡದಿಂದ ಅಧ್ಯಕ್ಷ ಸ್ಥಾನಕ್ಕೆ ಬಿ.ವಿ.ಬಸವರಾಜ್ ಮತ್ತು ಕಾರ್ಯದರ್ಶ ಸ್ಥಾನಕ್ಕೆ ಹೆಚ್.ಎಂ.ಗುರುಸಿದ್ದಸ್ವಾಮಿ.
ಹಾಗು ಯುವಕರ ಗುಂಪಿನ ಗ್ರಾಮೀಣ ಭಾಗದ ಹಗರಿಬೊಮ್ಮಹಳ್ಳಿ ತಾಲೂಕಿನ
ಬ್ಯಾಲಚಿಂತೆ ಆರ್. ರಾಮನಗೌಡ ಅಧ್ಯಕ್ಷ ಸ್ಥಾನಕ್ಕೆ ಮತ್ತ ನಗರದ ಟಿ.ಸಿ.ವಿರೂಪಾಕ್ಷಗೌಡ ಅವರು ಕಾರ್ಯದರ್ಶಿ ಸ್ಥಾನಕ್ಕೆ ಅಯ್ಕೆ ಬಯಸಿದ್ದರಿಂದ ಚುನಾವಣೆ ನಡೆಯಿತು.
ಒಟ್ಟು 30 ಸದಸ್ಯರ ಪೈಕಿ ಬಣಾಪುರದ ನಾಗಭೂಷಣ ಗೌಡ ಅವರು ಸಭೆಗೆ ಗೈರು ಹಾಜರಾಗಿದ್ದರು. ಉಳಿದ 29 ಸದಸ್ಯರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಗುಪ್ತ ಮತದಾನ ನಡೆಯಿತು. ರಾಮನಗೌಡರಿಗೆ 15 ಮತ್ತು ಬಿವಿ ಬಸವರಾಜ್ ಅವರಿಗೆ 14 ಮತಗಳು ಬಂದವು.
ಕಾರ್ಯದರ್ಶಿ ಸ್ಥಾನದ ಚುನಾವಣೆಯಲ್ಲಿ ಗುರುಸಿದ್ದಸ್ವಾಮಿ ಅವರಿಗೆ 15 ಮತ್ತು ವಿರುಪಾಕ್ಷಗೌಡ ಅವರಿಗೆ 14 ಮತಗಳು ಬಂದವು.
ಅಧ್ಯಕ್ಷರಾಗಿ ರಾಮನಗೌಡರು, ಕಾರ್ಯದರ್ಶಿಯಾಗಿ ಗುರುಸಿದ್ದಸ್ವಾಮಿ ಅವರು ಆಯ್ಕೆಯಾಗಿದ್ದಾರೆಂದು ಚುನಾವಣೆ ನಡೆಸಿದ ಉಪಾಧ್ಯಕ್ಷ ಅಲ್ಲಂ ಚೆನ್ನಪ್ಪ ಘೋಷಣೆ ಮಾಡಿದರು.
ಬಿ.ವಿ.ಬಸವರಾಜ್ ಅವರ ಸೋಲು ಗುರುಸಿದ್ದಸ್ವಾಮಿ ಅವರ ಮುಖದಲ್ಲಿ ನೋವನ್ನು ಪ್ರತಿಬಿಂಬಿಸುತ್ತಿತ್ತು.
ಈಗ ಯುವಕರ ಮತ್ತು ಹಿರಿಯರ ಗುಂಪಿನ ಸಮ್ಮಿಳಿತ ಆಡಳಿತಕ್ಕೆ ಬಂದಂತಾಗಿದೆ.
ನೂತನ ಅಧ್ಯಕ್ಷರ ಆಯ್ಕೆಯ ನಂತರ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು